ADVERTISEMENT

ನೀರೆಯರ ಮನಸೆಳೆದ ಡೇರೆ..

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 7:14 IST
Last Updated 14 ಜುಲೈ 2013, 7:14 IST

ಶಿರಸಿ: ನೆಂಟರಿಷ್ಟರ ಮನೆಗೆ ಹೋದಾಗ `ನಮ್ಮ ಮನೆ ಅಂಗಳದಲ್ಲಿ ಹೊಸ ಬಣ್ಣದ ಡೇರೆ ಹೂ ಅರಳಿದೆ' ಎಂದು ಪರಸ್ಪರ ಹರಟುತ್ತಿದ್ದ ಹಳ್ಳಿ ಹೆಂಗಳೆಯರು ತಾವು ಬೆಳೆದ ಡೇರೆ ಹೂಗಳನ್ನು ಪೇಟೆಗೆ ತಂದು ಹೆಮ್ಮೆಯಿಂದ ಬೀಗಿದರು. ಬಣ್ಣದ ಹೂಗಳಿಗೆ ಮನಸೋತು ಪಟ್ಟಣಿಗರು ಡೇರೆ ಗಿಡಗಳನ್ನು ಪೈಪೋಟಿಯಿಂದ ಖರೀದಿಸಿದರು.

ಮನೆ ಅಂಗಳಕ್ಕೆ ಸೀಮಿತವಾಗಿದ್ದ ಡೇರೆ ಈಗ ಮಾರುಕಟ್ಟೆ ಪ್ರವೇಶಿಸಿದೆ. ಹವ್ಯಾಸಕ್ಕಾಗಿ ಬೆಳೆಸಿದ ಡೇರೆ ಹೂಗಳು ಮಹಿಳೆಯರಿಗೆ ಉಪ ಆದಾಯ ತಂದುಕೊಡುತ್ತಿವೆ.

ಡೇರೆ ಹೂಗಳಿಗೆ ಮಾರುಕಟ್ಟೆ ಕಲ್ಪಿಸುವ, ಬೆಳೆಗಾರ ಮಹಿಳೆಯರಿಗೆ ಒಂದಿಷ್ಟು ಆದಾಯದ ಮೂಲ ಒದಗಿಸುವ ಉದ್ದೇಶದಿಂದ ನಗರದ ಯೋಗ ಮಂದಿರದಲ್ಲಿ ಶನಿವಾರ ನಡೆದ ಡೇರೆ ಮೇಳಕ್ಕೆ ನೂರಾರು ಜನ ಭೇಟಿ ನೀಡಿ ಡೇರೆ ಗಿಡಗಳನ್ನು ಕೊಂಡುಕೊಂಡರು.

ಏಡಿಕೊಂಬು, ಮಂದಾರ ಅರಿಶಿಣ, ಅರಿಶಿಣ ಕಡ್ಡಿ, ಲಿಲ್ಲಿಪುಟ್ಟ, ಕೊಚ್ಚುಕಡ್ಡಿ, ಮಂದಾರ ಬಿಳಿ, ಅರಿಶಿಣ ಉಂಡೆ, ಡಿಲ್ಲಿ ಡೇರೆ, ಬಿಂಜಲು ಕಡ್ಡಿ ಡೇರೆ ಹೂವುಗಳು ಗ್ರಾಹಕರನ್ನು ಸೆಳೆದವು. 

ವಿವಿಧ ಜಾತಿಯ 75ರಷ್ಟು ಡೇರೆ ಗಿಡಗಳನ್ನು ಬೆಳೆಸಿರುವ ನೀರ್ನಳ್ಳಿ ವೇದಾ ಹೆಗಡೆ ಹೇಳುವ ಪ್ರಕಾರ `ಹಬ್ಬ-ಹರಿದಿನಗಳಲ್ಲಿ ಒಂದು ಡೇರೆ ಹೂ 40 ರೂಪಾಯಿ ತನಕವೂ ಮಾರಾಟವಾಗುತ್ತದೆ. ಸಾಮಾನ್ಯ ಡೇರೆ ಗಿಡಕ್ಕೆ ಕನಿಷ್ಠ 10ರೂಪಾಯಿ ಇದ್ದರೆ ಅಪರೂಪದ ತಳಿಗೆ 100 ರೂಪಾಯಿ ಕೊಟ್ಟು ಖರೀದಿಸುತ್ತಾರೆ. ಬೇಡಿಕೆ ಹೆಚ್ಚಿದ್ದಾಗ ಹೂಗಳನ್ನು ಮಾರುಕಟ್ಟೆಗೆ ತಂದು ಮಹಿಳೆಯರು ಆದಾಯ ಗಳಿಸಿಕೊಳ್ಳಬೇಕು.'

`ನಮ್ಮ ಡೇರೆ ಕೃಷಿಯಿಂದ ಪ್ರೇರಿತರಾಗಿ ನಾಲ್ಕಾರು ಮಹಿಳೆಯರು ಡೇರೆ ಬೆಳೆಸಿದ್ದಾರೆ. ಡೇರೆ ಗಿಡದ ಗಡ್ಡೆ ಕಾಪಾಡಿಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಹಿಂದಿನ ವರ್ಷ 150ರಷ್ಟು ಗಿಡಗಳಲ್ಲಿ ಹೂ ಅರಳಿದ್ದವು. ಬಹಳಷ್ಟು ಹೂಗಳ ಮಾರುಕಟ್ಟೆಯಲ್ಲಿ ಉತ್ತಮ ದರಕ್ಕೆ ಮಾರಾಟವಾದವು' ಎಂದು ಅವರು ಅನುಭವ ಹೇಳಿಕೊಂಡರು.

ಡೇರೆ ಜೊತೆ ದಾಸವಾಳ, ಸೇವಂತಿಗೆ, ಚೆಂಡು ಹೂ, ಕೋಟೆ ಹೂವು, ಗೌರಿ ಹೂವಿನ ಗಿಡ ಮತ್ತು ಬೀಜಗಳನ್ನು  ಗುಂಡಿಗದ್ದೆ, ಗುಬ್ಬಿಗದ್ದೆ, ಪುಟ್ಟನಮನೆ, ಬೆಳಗಲಮನೆ, ಶೀಗೇಮನೆ, ಹಂದಿಮನೆ, ಹುಳಗೋಳ, ಸಿದ್ದಾಪುರ ತಾಲ್ಲೂಕಿನ ಕಲ್ಲಗದ್ದೆ, ಹುಲಿಮನೆ ಇನ್ನಿತರ ಹಳ್ಳಿಗಳ ಮಹಿಳೆಯರು ತಂದಿದ್ದರು. ತೋಟಗಾರಿಕಾ ಕಾಲೇಜಿನ ಡೀನ್ ಲಕ್ಷ್ಮೀನಾರಾಯಣ ಹೆಗಡೆ, ವಾಸಂತಿ ಹೆಗಡೆ, ಚೇತನಾ ಹೆಗಡೆ, ಪ್ರಭಾವತಿ ಭಟ್ಟ, ಗಂಗಾ ಹೆಗಡೆ, ಲತಾ ಹೆಗಡೆ, ರಾಜಲಕ್ಷ್ಮಿ ಹೆಗಡೆ, ಶ್ರೀನಿವಾಸ, ಅಂಜನಾ ಭಟ್ಟ ಮೊದಲಾದವರು ಮೇಳಕ್ಕೆ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.