ಶಿರಸಿ: `ರೋಚಕ ಬರವಣಿಗೆ ಮಾಧ್ಯಮದ ಬೇಡಿಕೆಯಾಗಿ ಬಿಟ್ಟಿದೆ. ಸದಾ ಜಾಗೃತವಾಗಿರಬೇಕಿದ್ದ ಮಾಧ್ಯಮಕ್ಕೆ ಅಜ್ಞಾನ ಮತ್ತು ಅಹಂಕಾರದ ದಿವ್ಯ ಪಾಪ ಅಂಟಿಕೊಂಡಿದೆ~ ಎಂದು ಸಾಹಿತಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.
ಅವರು ನಗರದ ಕಾನೂನು ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಜಿ.ಎಸ್.ಹೆಗಡೆ ಅಜ್ಜೀಬಳ ಮೊದಲ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ~ಮಾಧ್ಯಮದ ಆತ್ಮಸಾಕ್ಷಿ~ ಕುರಿತು ಮಾತನಾಡಿದರು.
`ಸಾಮಾಜಿಕ ಕಳಕಳಿಯ ತುಡಿತದಿಂದ ಮಾಧ್ಯಮಕ್ಕೆ ಸಿಟ್ಟು ಬರಬೇಕು. ಮಾಧ್ಯಮಕ್ಕೆ ಮಾನವಂತಿಕೆಯ ಎಚ್ಚರಿಕೆ ಇರಬೇಕು. ಮಾಧ್ಯಮದ ವ್ಯಕ್ತಿ ಜಾಗೃತವಾಗಿದ್ದು, ಸಮಾಜದಲ್ಲಿ ಘಟಿಸುವ ಘಟನಾವಳಿಗಳನ್ನು ಮಾನವಿಯ ನೆಲೆಯಲ್ಲಿ ಅವಲೋಕಿಸಬೇಕು. ಅಪಘಾತದಂತಹ ಘಟನೆ ನಡೆದಾಗ ಮೃತದೇಹದ ಚಿತ್ರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವುದು ನಿಜಕ್ಕೂ ಅಮಾನವೀಯವಾಗಿದೆ~ ಎಂದರು.
`ಮಾಧ್ಯಮದಲ್ಲಿ ಬರುವ ವರದಿಗಳನ್ನು ಜನಸಾಮಾನ್ಯರು ಇಂದಿಗೂ ಅತ್ಯಂತ ಶ್ರದ್ಧೆಯಿಂದ ಸ್ವೀಕರಿಸುತ್ತಾರೆ. ಹೀಗಾಗಿ ಜನರಿಗೆ ಬೇಕಾದ ಸಂಗತಿಗಳು ಅತಿಶಯೋಕ್ತಿ, ಆಮಿಷಗಳ ಲೇಪವಿಲ್ಲದೆ ಮಾಧ್ಯಮಗಳಲ್ಲಿ ಪ್ರಸಾರ ಕಾಣಬೇಕು. ಪ್ರತಿಯೊಬ್ಬ ಪತ್ರಕರ್ತ ಆತ್ಮಸಾಕ್ಷಿ ಸರಿಯಾಗಿ ಇಟ್ಟುಕೊಂಡರೆ ಒಟ್ಟಾರೆ ಮಾಧ್ಯಮದ ಆತ್ಮಸಾಕ್ಷಿ ಸರಿಯಾಗಿರುತ್ತದೆ. ಮಾಧ್ಯಮದ ಮಾಯಾಪುರಿಯಲ್ಲಿ ಪತ್ರಕರ್ತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಚಿಕ್ಕ ಘಟನಾವಳಿಗಳನ್ನು ಅತಿರಂಜನೆ ಮಾಡುವ ಮೂಲಕ ಮಾಧ್ಯಮದ ಮಂದಿಯೇ ಕೆಲವೊಮ್ಮೆ ಭಯೋತ್ಪಾದಕರಂತೆ ಕಾಣುತ್ತಾರೆ. ಮಾಧ್ಯಮದ ಮಂದಿಗೆ ಸ್ವಯಂ ಹಿಡಿತ ಇರಬೇಕು. ನಿರ್ಮಲ ಮನಸ್ಸಿನಿಂದ ಮಮತೆ ಮತ್ತು ಸಮತೆಯ ಪರಿಸರದಲ್ಲಿ ಜಗತ್ತನ್ನು ನೋಡುವ ಕಾರ್ಯ ಆಗಬೇಕು. ಇದಕ್ಕೆ ಮಾಧ್ಯಮ ಆತ್ಮಸಾಕ್ಷಿಯಾಗಿ ಕೆಲಸ ಮಾಡಬೇಕು~ ಎಂದರು.
`ಹೊಸ ತಲೆಮಾರಿಗೆ ದುಡ್ಡಿದ್ದವನೇ ದೊಡ್ಡವನು ಎಂಬ ಕಲ್ಪನೆ ಇದೆ. ವರ್ತಮಾನದಲ್ಲಿ ಹಣ ವೈಭವೀಕರಣಗೊಳ್ಳುತ್ತಿದೆ. ಕರೋಡ್‌ಪತಿಯಂತಹ ಕಾರ್ಯಕ್ರಮಗಳು ಜ್ಞಾನದ ಜೊತೆಗೆ ಹಣವನ್ನು ವೈಭವೀಕರಿಸುವ ವಾತಾವರಣ ಸೃಷ್ಠಿಸಿವೆ. ಇಂತಹ ಸಂದರ್ಭದಲ್ಲಿ ಹಣ ಗಳಿಕೆಯೇ ಬದುಕಲ್ಲ ಎನ್ನುವವರು ಮಹಾನ್ ವ್ಯಕ್ತಿಗಳಾಗಿ ಕಾಣುತ್ತಾರೆ~ ಎಂದರು.
ವೇದಿಕೆಯಲ್ಲಿ ಮಾಡರ್ನ್ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಎಸ್.ಎಂ.ಹೆಗಡೆ, ಕಾಲೇಜ್ ಉಪಸಮಿತಿ ಅಧ್ಯಕ್ಷ ಜಿ.ಜಿ.ಹೆಗಡೆ ಉಪಸ್ಥಿತರಿದ್ದರು.
ಪ್ರಾಚಾರ್ಯ ಜೆ.ಆರ್.ತಲಗೇರಿ ಸ್ವಾಗತಿಸಿದರು. ಹರಿದಾಸ ಆರ‌್ವಾರೆ ನಿರೂಪಿಸಿದರು. ಎ.ಎನ್. ಭಟ್ಕಳ ವಂದಿಸಿದರು.
ಒಡೆದ ಆತ್ಮಸಾಕ್ಷಿ
`ಮಾಧ್ಯಮದಲ್ಲಿ ಆತ್ಮ ಮತ್ತು ಸಾಕ್ಷಿ ಬೇರೆಯಾಗಿರುವುದು ದುರಂತವಾಗಿದೆ. ಮಾಧ್ಯಮ ಉಳ್ಳವರ ಕೈಗೊಂಬೆಯಾಗಿ ಒಂದೊಂದು ಪತ್ರಿಕೆ ಒಂದೊಂದು ಪಕ್ಷದ ದನಿಯಾದರೆ ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ದನಿ ಕೇಳುವವರು ಯಾರು~ ಎಂದು ಜಯಂತ ಕಾಯ್ಕಿಣಿ ಪ್ರಶ್ನಿಸಿದರು.
`ನಾವೆಲ್ಲ ಕಲಿಯುವಾಗ ಶಾಲೆಯ ಶೈಕ್ಷಣಿಕ ಕಾರ್ಯಕ್ರಮಕ್ಕೆ ಆದರ್ಶ ವ್ಯಕ್ತಿಗಳು ಅತಿಥಿಯಾಗುತ್ತಿದ್ದರು. ಇಂದು ಹಣವುಳ್ಳ ಹೊಲಸು ಮಾದರಿಗಳು ಕೇಂದ್ರಬಿಂದುಗಳಾತ್ತಿವೆ~ ಎಂದು ಅವರು ವಿಷಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.