ADVERTISEMENT

ಪತ್ರಕರ್ತರ ಒಕ್ಕೂಟ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 4:40 IST
Last Updated 23 ಸೆಪ್ಟೆಂಬರ್ 2011, 4:40 IST

ಮುಂಡಗೋಡ: ಪತ್ರಕರ್ತರು ವರದಿ ಮಾಡುವ ಶೈಲಿಯನ್ನು ಉತ್ತಮವಾಗಿ ರೂಢಿಸಿಕೊಂಡರೆ ಮಾತ್ರ ಓದುಗರ ಮನ ತಟ್ಟಲು ಸಾಧ್ಯವಾಗುತ್ತದೆ ಎಂದು ಶಾಸಕ ವಿ.ಎಸ್.ಪಾಟೀಲ ಹೇಳಿದರು.

ಅವರು ಬುಧವಾರ ಇಲ್ಲಿಯ ತಾ.ಪಂ. ಸಭಾಭವನದಲ್ಲಿ ತಾಲ್ಲೂಕು ಪತ್ರಕರ್ತರ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜ ತಿದ್ದುವ  ಜವಾಬ್ದಾರಿ ಪತ್ರಿಕೆಗಳ ಮೇಲಿದ್ದು ಒಳ್ಳೆಯದನ್ನು ಹೆಚ್ಚು ಬಿಂಬಿಸುವ ಕೆಲಸ ಮಾಡಬೇಕಾಗಿದೆ. ಜನರಿಗೆ ಮೂಲ  ಸೌಲಭ್ಯಗಳನ್ನು ಒದಗಿಸುವಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾಗಿದೆ ಎಂದರು.

ಉದ್ಯಮಿ ಶಿವರಾಮ ಹೆಬ್ಬಾರ,  ಮಾಧ್ಯಮಗಳು ವಿಶ್ಲೇಷಣೆ ಹಾಗೂ ಹೊಸತನ್ನು ಹುಡುಕುವದರತ್ತ ಹೆಚ್ಚಿನ ಗಮನ ನೀಡಬೇಕು. ವ್ಯಕ್ತಿಗತ ಟೀಕೆಗೆ ಹೆಚ್ಚಿನ ಒತ್ತು ನೀಡದೇ ಸಮಾಜದಲ್ಲಿ ತಮಗಿರುವ ಮೌಲ್ಯವನ್ನು ಹೆಚ್ಚಿಸಿಕೊಳ್ಳುವದರತ್ತ ಪ್ರಯತ್ನಿಸಬೇಕು. ಪತ್ರಿಕೆಗಳಿಂದ ಹೆದರಿಸುವ ಕೆಲಸ ನಡೆಯಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಉದ್ಯಮಿ ಡಿ.ಅನಿಲಕುಮಾರ,  ಜನರ ಮೇಲೆ ವ್ಯಾಪಕ ಪರಿಣಾಮ ಬೀರುವ ಶಕ್ತಿ ಮಾಧ್ಯಮ ಕ್ಷೇತ್ರಕ್ಕಿದೆ. ಸತ್ಯಾಂಶವನ್ನು ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಜನರ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯ ಎಂದರು.

ಜೆ.ಡಿ.ಎಸ್. ಮುಖಂಡ ಬಸವರಾಜ ಓಶೀಮಠ ಮಾತನಾಡಿದರು. ಶಹನಾಯಿ ವಾದಕ ಫಕ್ಕೀರಪ್ಪ ಭಜಂತ್ರಿ ಹಾಗೂ ವೈದ್ಯಾಧಿಕಾರಿ ಡಾ.ಲಕ್ಷ್ಮೀದೇವಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ.ಪಂ. ಅಧ್ಯಕ್ಷ ಎಂ.ಕೆ. ಗಡವಾಲೆ, ತಾ.ಪಂ. ಅಧ್ಯಕ್ಷೆ ಲಕ್ಷ್ಮೀಬಾಯಿ ಕೊರವರ, ಉಪಾಧ್ಯಕ್ಷೆ ಲಕ್ಷ್ಮವ್ವ ಶೇಟ್, ರೋಟರಿ ಕ್ಲಬ್ ಅಧ್ಯಕ್ಷ ಸಂಗಮೇಶ ಬಿದರಿ, ತಹಸೀಲ್ದಾರ ಎಂ.ವಿ. ಕಲ್ಲೂರಮಠ, ಶ್ರೀಧರ ಡೋರಿ, ಒಕ್ಕೂಟದ ಅಧ್ಯಕ್ಷ ಜಗದೀಶ ದೈವಜ್ಞ ಇತರರು ಉಪಸ್ಥಿತರಿದ್ದರು.

ಶಾಸಕರ ಮಾದರಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನಾಗೀತೆ ಹಾಡಿದರು. ನಾಗರಾಜ ಬಾರ್ಕಿ ಸ್ವಾಗತಿಸಿದರು. ನಾಗರಾಜ ನಾಯ್ಕ ನಿರೂಪಿಸಿದರು. ಸಂತೋಷ ದೈವಜ್ಞ ವಂದಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.