ADVERTISEMENT

ಪ್ಯಾಕಿಂಗ್ ಘಟಕ ಪ್ರಸ್ತಾವಕ್ಕೆ ಮತ್ತೆ ಜೀವ

ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲು ಕೆಎಂಎಫ್‌ಗೆ ಪತ್ರ

ಸಂಧ್ಯಾ ಹೆಗಡೆ
Published 27 ಜನವರಿ 2016, 7:06 IST
Last Updated 27 ಜನವರಿ 2016, 7:06 IST
ಶಿರಸಿ ತಾಲ್ಲೂಕಿನ ಹನುಮಂತಿಯಲ್ಲಿರುವ ಧಾರವಾಡ ಹಾಲು ಒಕ್ಕೂಟದ ಶೀತಲೀಕರಣ ಘಟಕ
ಶಿರಸಿ ತಾಲ್ಲೂಕಿನ ಹನುಮಂತಿಯಲ್ಲಿರುವ ಧಾರವಾಡ ಹಾಲು ಒಕ್ಕೂಟದ ಶೀತಲೀಕರಣ ಘಟಕ   

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಂದಿನಿ ಹಾಲಿನ ಪ್ಯಾಕಿಂಗ್‌ ಘಟಕ ಸ್ಥಾಪನೆಗೆ ಬಂಡವಾಳ ಹೂಡಲು ಖಾಸಗಿ ಕಂಪೆನಿಗಳು ಮುಂದೆ ಬಂದಿವೆ. ಈ ಮೂಲಕ ಜಿಲ್ಲೆಯ ಜನರ ದಶಕದ ಕನಸು ಮತ್ತೊಮ್ಮೆ ಜೀವ ತಳೆದಿದೆ. 

ಕರ್ನಾಟಕ ಹಾಲು ಮಹಾಮಂಡಳದ ಅಡಿಯಲ್ಲಿ ಬರುವ ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ 206 ಹಾಲು ಉತ್ಪಾದಕ ಸಂಘಗಳು ಇವೆ. 9800ರಷ್ಟು ರೈತರು ಪ್ರತಿದಿನ 43ಸಾವಿರ ಲೀಟರ್ ಹಾಲನ್ನು ಹಾಲು ಸಂಘಗಳ ಮೂಲಕ ಕೆಎಂಎಫ್‌ಗೆ ನೀಡುತ್ತಾರೆ. ಜಿಲ್ಲೆಯಲ್ಲಿ ಉತ್ಪಾದನೆ ಯಾಗುವ ಹಾಲು ಧಾರವಾಡದ ಮುಖ್ಯ ಘಟಕಕ್ಕೆ ಹೋಗಿ ಪ್ಯಾಕ್‌ ಆಗ ಪುನಃ ಜಿಲ್ಲೆಗೆ ಬಂದು ಗ್ರಾಹಕರ ಕೈ ಸೇರುತ್ತದೆ. ಇದಕ್ಕೆ ವಾರ್ಷಿಕವಾಗಿ ತಗಲುವ ವೆಚ್ಚ ಅಂದಾಜು ₹ 2.45 ಕೋಟಿ.

ಸಾಗಾಣಿಕಾ ವೆಚ್ಚ ತಗ್ಗಿಸಲು ಹಾಗೂ ಗ್ರಾಹಕರಿಗೆ ಗುಣಮಟ್ಟದ ಹಾಲು ಪೂರೈಸಲು ಶಿರಸಿ ತಾಲ್ಲೂಕಿನ ಹನುಮಂತಿಯಲ್ಲಿರುವ ಶೀತಲೀಕರಣ ಘಟಕದ ಆವರಣದಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಪ್ಯಾಕಿಂಗ್‌ ಘಟಕ ಸ್ಥಾಪನೆ ಮಾಡಬೇಕು ಎಂಬುದು ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯಾಗಿದೆ.

ಧಾರವಾಡ ಹಾಲು ಒಕ್ಕೂಟದ ಜಿಲ್ಲೆಯ ನಿರ್ದೇಶಕರು, ಸ್ಥಳೀಯ ಶಾಸಕರು, ಸಂಸದರು ಹಾಲಿನ ಪ್ಯಾಕಿಂಗ್‌ ಘಟಕ ಸ್ಥಾಪನೆಗೆ ಅನುದಾನ ಒದಗಿಸುವಂತೆ ಅನೇಕ ಬಾರಿ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಅನುದಾನದ ಅಲಭ್ಯತೆಯಿಂದ ಈ ಪ್ರಸ್ತಾವ ನನೆಗುದಿಗೆ ಬಿದ್ದಿತ್ತು. ಪ್ರಸ್ತುತ ಸರ್ಕಾರದ ಪಬ್ಲಿಕ್ ಪ್ರೈವೇಟ್‌ ಪಾರ್ಟನರ್‌ಷಿಪ್ (ಪಿಪಿಪಿ) ವ್ಯವಸ್ಥೆಯಡಿ ಕೆಎಂಎಫ್‌ ಸೇರಿಕೊಂಡಿದ್ದು, ಜಿಲ್ಲೆಯಲ್ಲಿ ಹಾಲಿನ ಪ್ಯಾಕಿಂಗ್‌ ಘಟಕ ಸ್ಥಾಪನೆಯ ಬಗ್ಗೆ ಆಶಾಭಾವ ಮೂಡಿದೆ.

ಒಕ್ಕೂಟದಲ್ಲಿ ನಿರ್ಣಯ: ಜಿಲ್ಲೆಯ ಮೂವರು ನಿರ್ದೇಶಕರು ಕಳೆದ 7ರಂದು ನಡೆದ ಧಾರವಾಡ ಹಾಲು ಒಕ್ಕೂಟದ ಸಭೆಯಲ್ಲಿ ಹಾಲಿನ ಪ್ಯಾಕಿಂಗ್‌ ಘಟಕ ಮಂಜೂರುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.

‘ಈ ಅರ್ಜಿಯನ್ನು ಇದೇ ಸಭೆಯಲ್ಲಿ ಚರ್ಚಿಸಿ ಪಿಪಿಪಿ ಮಾದರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ಯಾಕಿಂಗ್ ಘಟಕ ಸ್ಥಾಪನೆಗೆ ಅಗತ್ಯ ಯೋಜನೆ ರೂಪಿಸುವಂತೆ ಧಾರವಾಡ ಒಕ್ಕೂಟವು ಕೆಎಂಎಫ್‌ಗೆ ಪತ್ರ ಬರೆದಿದೆ. ಈಗಾಗಲೇ ಕೆಲವು ಕಂಪೆನಿಗಳು ಬಂಡವಾಳ ಹೂಡಲು ಆಸಕ್ತಿ ತೋರಿವೆ’ ಎಂದು ಒಕ್ಕೂಟದ ಈ ಭಾಗದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಹಾರ ಸುರಕ್ಷತಾ ಕಾಯ್ದೆ ಪ್ರಕಾರ ಹಾಲಿನ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ರೈತರಿಗೆ ನ್ಯಾಯ ಕೊಡುವ ಜೊತೆಗೆ ಗ್ರಾಹಕರಿಗೆ ಇನ್ನಷ್ಟು ಒಳ್ಳೆಯ ಹಾಲನ್ನು ನೀಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಹಾಲಿನ ಪ್ಯಾಕಿಂಗ್‌ ಘಟಕ ಶೀಘ್ರ ಸ್ಥಾಪನೆ ಆಗುವುದು ಅಗತ್ಯವಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಹಿಂದಿನ ವರ್ಷ 128 ಹಾಲು ಉತ್ಪಾದಕ ಸಂಘಗಳು ಇದ್ದವು. ಈಗ 78 ಸಂಘಗಳು ಹೆಚ್ಚಾಗಿದ್ದು, 16 ಹೊಸ ಸಂಘಗಳು ರಚನೆಯಾಗುವ ಹಂತದಲ್ಲಿವೆ. ದಿನಕ್ಕೆ 23ಸಾವಿರ ಲೀಟರ್‌ ಇದ್ದ ಹಾಲಿನ ಉತ್ಪಾದನೆ 43ಸಾವಿರ ಲೀಟರ್‌ಗೆ ಏರಿಕೆಯಾಗಿದೆ. ಪ್ರತಿವರ್ಷ ಹಾಲಿನ ಉತ್ಪಾದನೆಯಲ್ಲಿ ಶೇ 21ರಷ್ಟು ಹೆಚ್ಚಳವಾಗುತ್ತಿದೆ. ಕರಾವಳಿ ಭಾಗದಲ್ಲಿ ಹಾಲಿನ ಬೇಡಿಕೆ ಇದೆ. ಜಿಲ್ಲೆಯಲ್ಲಿ ಪ್ಯಾಕಿಂಗ್‌ ಘಟಕ ಪ್ರಾರಂಭವಾದರೆ ಕೈಗಾ, ಸೀಬರ್ಡ್‌ ಪ್ರದೇಶಗಳಲ್ಲಿ ಇನ್ನಷ್ಟು ಹೆಚ್ಚು ಗ್ರಾಹಕರನ್ನು ಸೆಳೆಯಬಹುದು’ ಎಂದು ಅವರು ಹೇಳಿದರು.

ಸಾಗಣೆ ವೆಚ್ಚದ ಹೊರೆಯನ್ನು ತಗ್ಗಿಸಲು ಕೆಎಂಎಫ್ ವಿಶೇಷ ಆಸಕ್ತಿ ವಹಿಸಿ  ಪ್ಯಾಕಿಂಗ್‌ ಘಟಕ ಸ್ಥಾಪನೆಗೆ ಕ್ರಮ ತೆಗೆದು ಕೊಳ್ಳಬೇಕು
ಸುರೇಶ್ಚಂದ್ರ ಹೆಗಡೆ,
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.