ADVERTISEMENT

ಬಿರ್ಲಾ ಗ್ರೂಪ್ ತೆಕ್ಕೆಗೆ ಸೊಲಾರಿಸ್ ಇಂಡಸ್ಟ್ರೀಸ್

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 6:33 IST
Last Updated 4 ಜೂನ್ 2013, 6:33 IST

ಕಾರವಾರ: ನಗರದ ಹೊರವಲಯ ಬಿಣಗಾದಲ್ಲಿರುವ ಅವಂಥಾ ಗ್ರೂಪ್ ಆಫ್ ಕಂಪೆನಿಗೆ ಸೇರಿದ `ಸೊಲಾರಿಸ್ ಕೆಮಟೆಕ್ ಇಂಡಸ್ಟ್ರೀಸ್ ಲಿಮಿಟೆಡ್ (ಹಿಂದೆ ಬಿಲ್ಟ್ ಎಂದಾಗಿತ್ತು)' ಆದಿತ್ಯ ಬಿರ್ಲಾ ಗ್ರೂಪ್‌ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಸುಮಾರು 153 ಕೋಟಿ ರೂಪಾಯಿಗೆ ಸೊಲಾರಿಸ್ ಕೆಮ್‌ಟೆಕ್ ಇಂಡ್‌ಸ್ಟ್ರೀಸ್ ಲಿಮಿಟೆಡ್ ಖರೀದಿಸಲು ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಮಂಡಳಿ ಒಪ್ಪಿಗೆ ನೀಡಿದೆ.

ಈ ಕುರಿತು ಬಿರ್ಲಾ ಗ್ರೂಪ್‌ನ ತನ್ನ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪ್ರಕಟಿಸಿದೆ. ಆದಿತ್ಯ ಬಿರ್ಲಾ ಕೆಮಿಕಲ್ಸ್ (ಇಂಡಿಯಾ)ಲಿಮಿಟೆಡ್ ಸೊಲಾರಿಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯಭಾರವನ್ನು ನೋಡಿಕೊಳ್ಳಲಿದೆ.

ಸೊಲಾರಿಸ್ ಇಂಡ್‌ಸ್ಟ್ರೀಸ್ ಖರೀದಿಸುವ ಮೂಲಕ ಆದಿತ್ಯ ಬಿರ್ಲಾ ಗ್ರೂಪ್ ರಾಸಾಯನಿಕ ವಸ್ತು ಉತ್ಪಾದನೆಯಲ್ಲಿ ದಕ್ಷಿಣ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಿದಂತಾಗಿದೆ.

`ಸೊಲಾರಿಸ್ ಇಂಡ್‌ಸ್ಟ್ರೀಸ್ ಖರೀದಿಸುವ ಮೂಲಕ ಆದಿತ್ಯ ಬಿರ್ಲಾ ಗ್ರೂಪ್‌ನ ಕ್ಲೋರಿನ್ ಆಧಾರಿತ ರಾಸಾಯನಿಕಗಳ ತಯಾರಿಕೆಗೆ ಹೆಚ್ಚಿನ ಬಲ ಬಂದಿದೆ' ಎಂದು ಗ್ರೂಪ್‌ನ ಚೇರಮನ್ ಕುಮಾರ ಮಂಗಲ ಬಿರ್ಲಾ ತಿಳಿಸಿದ್ದಾರೆ.

`ಕೆಮಿಕಲ್ ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆಗೆ ಅವಕಾಶವಾಗುವುದರೊಂದಿಗೆ ಅಲ್ಯೂಮಿನಿಯಂ ಮತ್ತು ವಿಸ್ಕೋ ಸ್ಟೇಪಲ್ ಪೈಬರ್ ವ್ಯವಹಾರಕ್ಕೂ ಇದು ನೆರವಾಗಲಿದೆ' ಎಂದು ಅವರು ಹೇಳಿದ್ದಾರೆ.

`ಸೊಲಾರಿಸ್ ಇಂಡ್‌ಸ್ಟ್ರೀಸ್ ಖರೀದಿಸಿದ್ದರಿಂದ ದಕ್ಷಿಣ ಪ್ರದೇಶದಲ್ಲಿ ಗ್ರೂಪ್ ಬೆಳಗವಣಿಗೆ ಹೆಚ್ಚಾಗಲಿದೆ. ಕಾಸ್ಟಿಕ್ ಸೋಡಾ ಮತ್ತು ಪಾಸ್ಪರಿಕ್ ಆ್ಯಸಿಡ್ ಉತ್ಪಾದನೆಯಲ್ಲಿ ಹೆಚ್ಚಿನ ಅಭಿವೃದ್ಧಿ ನಮಗೆ ಸಾಧ್ಯವಾಗಲಿದೆ' ಎಂದು ಗ್ರೂಪ್‌ನ ಕೆಮಿಕಲ್ ಘಟಕದ ವ್ಯವಹಾರ ವಿಭಾಗದ ಮುಖ್ಯ ಲಲಿತ್ ನಾಯಕ ತಿಳಿಸಿದ್ದಾರೆ.

`ಬಿಣಗಾದಲ್ಲಿರುವ ಕಂಪೆನಿ ವಶಕ್ಕೆ ಪಡೆಯುವುದರೊಂದಿಗೆ ಪ್ರತಿವರ್ಷ 60 ಸಾವಿರ ಟನ್ ಕಾಸ್ಟಿಕ್ ಸೋಡಾ, ಮತ್ತು 24 ಸಾವಿರ ಟನ್ ಪಾಸ್ಪರಿಕ್ ಆ್ಯಸಿಡ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿರುವ ಘಟಕ ಹಾಗೂ ಗುಜರಾತ್‌ನಲ್ಲಿರುವ ಮೂರು ಸಾವಿರ ಎಕರೆ ಉಪ್ಪು ಉತ್ಪಾದನಾ ಘಟಕ ಆದಿತ್ಯ ಬಿರ್ಲಾ ತೆಕ್ಕೆಗೆ ಬಂದಿದೆ' ಎಂದು ಅವರು ಹೇಳಿದ್ದಾರೆ.

`ಮರ್ಕ್ಯೂರಿ ತಂತ್ರಜ್ಞಾನದ ಮೇಲೆ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಸೋಲಾರಿಸ್ ಇಂಡ್‌ಸ್ಟ್ರೀಸ್ 31, ಡಿಸೆಂಬರ್ 2012ರಿಂದ ಕಾಸ್ಟಿಕ್ ಸೋಡಾ ಉತ್ಪಾದನೆ ಸ್ಥಗಿತಗೊಳಿಸಿದೆ. ಹೊಸ ಮೆಬ್ರೆನ್ ಆಧಾರಿತ ತಂತ್ರಜ್ಞಾನ ಬಳಿಸಿ ನಮ್ಮ ಕಂಪೆನಿ ಈ ಘಟಕವನ್ನು ಪುನರಾರಂಭಿಸಲಿದೆ' ಎಂದು ನಾಯಕ ತಿಳಿಸಿದ್ದಾರೆ.

ಸೊಲಾರಿಸ್ ಕಂಪೆನಿ 2012-13ರಲ್ಲಿ 33, 747 ಟನ್ ಕಾಸ್ಟಿಕ್ ಸೋಡಾ ಮತ್ತು 21379 ಟನ್ ಪಾಸ್ಪರಿಕ್ ಆ್ಯಸಿಡ್ ಉತ್ಪಾದಿಸುವ ಮೂಲಕ ಒಟ್ಟು ರೂ 254 ಕೋಟಿ ವಹಿವಾಟು ನಡೆಸಿದೆ. ಈ ವ್ಯವಹಾರ ಕಾನೂನು ಮತ್ತು ನೀತಿ ನಿಯಮಗಳ ಅನುಮೋದನೆಗೆ ಒಳಪಟ್ಟಿದೆ.

ಬಿರ್ಲಾ ಇಂಡಿಯಾ ಪ್ರತಿವರ್ಷ 242725 ಟನ್ ಕ್ಲೋರಿನ್ ಆಧಾರಿತ ರಾಸಾಯನಿಕಗಳನ್ನು ತಯಾರಿಸುತ್ತಿದೆ. ಆಂತರಿಕ ಸಂಪನ್ಮೂಲ ಮತ್ತು ಸಾಲಗಳ ಮೂಲಕ ಬಂಡವಾಳ ಸಂಗ್ರಹ ಮಾಡಿ ಹೊಸ ಘಟಕ ನಿರ್ವಹಣೆಗೆ ಆದಿತ್ಯ ಬಿರ್ಲಾ ಗ್ರೂಪ್ ಮುಂದಾಗಿದೆ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.