ಶಿರಸಿ: ಕುಡಿಯುವ ನೀರು ಪೂರೈಕೆಯ ಉದ್ದೇಶದಿಂದ ತಾಲ್ಲೂಕಿನ ಬಿಸಲಕೊಪ್ಪದಲ್ಲಿ ನಾಲ್ಕು ಯೋಜನೆಗಳು ಅನುಷ್ಠಾನಗೊಂಡಿವೆ. ನಾಲ್ಕು ನೀರಿನ ಯೋಜನೆಗಳಿಗೆ ಲಕ್ಷಾಂತರ ರೂಪಾಯಿ ಖರ್ಚಾಗಿದ್ದರೂ ಇಡೀ ಊರಿನ ಎಲ್ಲ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಸಾಧ್ಯವಾಗಿಲ್ಲ. ಇದು ಜನಪ್ರತಿನಿಧಿಗಳು, ಅಧಿಕಾರಿಗಳ ದೂರದರ್ಶಿತ್ವದ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ.
ಸುಮಾರು 15 ವರ್ಷಗಳ ಹಿಂದೆ ರಾಮನಗರ ಭಾಗದ 14 ಮನೆಗಳಿಗೆ ನೀರು ಪೂರೈಸಲು ಸ್ಥಳೀಯ ಗ್ರಾಮ ಪಂಚಾಯ್ತಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿ ಸಿತು. ಕೆರೆಯ ಸಮೀಪದ ಬಾವಿಯಿಂದ ಮನೆಗಳಿ ರುವ ಪ್ರದೇಶಕ್ಕೆ ನೀರು ಸರಬರಾಜು ಮಾಡಲು ಎರಡು ಟಾಕಿಗಳನ್ನು ನಿರ್ಮಿಸಲಾಯಿತು.
ಇದರಿಂದ ಎಲ್ಲ ಮನೆಗಳಿಗೆ ನೀರು ಲಭ್ಯವಾಗದ ಕಾರಣ ಹೆಚ್ಚುವರಿಯಾಗಿ ₨ 1.5 ಲಕ್ಷ ವೆಚ್ಚ ಮಾಡಿ ಮತ್ತೊಂದು ಟಾಕಿ ನಿರ್ಮಿಸಿ ಪೈಪ್‌ಲೈನ್ ಹಾಕಲಾಯಿತು. ಆದರೆ ಇಂದಿಗೂ ಇಲ್ಲಿನ ಆರು ಮನೆಗಳಿಗೆ ನೀರು ದೊರೆಯುತ್ತಿಲ್ಲ. ‘ನಮಗೆ ನೀರಿನ ಅಗತ್ಯವಿದ್ದಾಗ ನಾವೇ ಟಾಕಿ ತುಂಬಿಸಿಕೊಂಡು, ಅಲ್ಲಿಂದ ಕೊಡದಿಂದ ನೀರನ್ನು ಮನೆಗೆ ಹೊತ್ತುಕೊಂಡು ಹೋಗಬೇಕು.
ನೀರು ಬಿಡಲು ವಾಲ್‌ಮನ್‌ಗಳಿಲ್ಲ. ಟಾಕಿ ಇರುವ ಪ್ರದೇಶದಿಂದ ದೂರ ಇರುವ ಮನೆಗಳಿಗೆ ನೀರು ಒಯ್ಯುವುದು ಸಮಸ್ಯೆಯಾಗುತ್ತಿದೆ’ ಎನ್ನುತ್ತಾರೆ ರಾಮನಗರದ ನಾಗವೇಣಿ ನಾಯ್ಕ. ‘ಬೇಸಿಗೆಯಲ್ಲಿ ಬಾವಿ ಬತ್ತಿ ಹೋಗುತ್ತದೆ. ನಮ್ಮ ಭಾಗದ ಮನೆಗಳಿಗೆ ಪಂಚಾಯ್ತಿಯ ನೀರು ಲಭ್ಯವಾಗುವುದಿಲ್ಲ. ಟಾಕಿಗೆ ನೀರು ಏರದಿರುವುದರಿಂದ ಟಾಕಿ ಸಹ ನಿರುಪಯುಕ್ತವಾಗಿದೆ’ ಎಂದು ಕೃಷ್ಣ ಪೂಜಾರಿ ಅಳಲು ತೋಡಿಕೊಂಡರು. ರಾಮನಗರದ ಮನೆಗಳಿಗೆ ನೀರು ಪೂರೈಸುವ ಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಬಾವಿ ಸ್ವಚ್ಛಗೊಳಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ರಾಮನಗರದ ಕತೆ ಇದಾದರೆ ಮೇಲಿನ ಕೇರಿ ಹಾಗೂ ಕೆಳಗಿನ ಕೇರಿಗಳಿಗೆ 2004–05ರ ಹೊತ್ತಿಗೆ ₨ 3.20 ಲಕ್ಷ ವೆಚ್ಚದಲ್ಲಿ ಅನುಷ್ಠಾನಗೊಳಿಸಿದ ಎರಡು ಪ್ರತ್ಯೇಕ ಜಲ ನಿರ್ಮಲ ಯೋಜನೆ ಕಾಮಗಾರಿ ಸಹ ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾಗಿದೆ. ಮೇಲಿನ ಕೇರಿಯ ಏಳೆಂಟು ಮನೆಗಳು ಜಲ ನಿರ್ಮಲ ಯೋಜನೆ ಅಡಿಯಲ್ಲಿ ನಿರ್ಮಿಸಿದ ನಳದಲ್ಲಿ ಒಂದು ದಿನವೂ ನೀರನ್ನು ಕಂಡಿಲ್ಲ.ಕೆಳಗಿನ ಕೇರಿಯ ಮನೆಗಳಿಗೆ ಮಾತ್ರ ಸರಿಯಾಗಿ ನೀರು ಲಭ್ಯವಾಗುತ್ತಿದೆ. ಆದರೆ ಇಲ್ಲಿ ಬರುವ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ.
ಈಗ ಸುಭಾಸ ನಗರದಲ್ಲಿ ಮತ್ತೊಂದು ಕುಡಿಯುವ ನೀರಿನ ಯೋಜನೆ ಸಿದ್ಧವಾಗಿದ್ದು, ಉದ್ಘಾಟನೆಗೆ ಕಾಯುತ್ತಿದೆ. ಸುಮಾರು 8 ವರ್ಷಗಳ ಹಿಂದೆ ಅಂದಿನ ಜಿಲ್ಲಾ ಪಂಚಾಯ್ತಿ ಸದಸ್ಯರ ಅನುದಾನದಲ್ಲಿ ಮಂಜೂರು ಆದ ₨ 1 ಲಕ್ಷ ಮೊತ್ತದಲ್ಲಿ ಕುಡಿಯುವ ನೀರಿನ ಬಾವಿ ತೆಗೆಯಲಾಗಿತ್ತು.
ಅಪೂರ್ಣಗೊಂಡಿದ್ದ ಕಾಮಗಾರಿಗೆ 2010–11ನೇ ಸಾಲಿನಲ್ಲಿ ಮತ್ತೆ ₨ 5 ಲಕ್ಷ ಹಾಗೂ ಹಾಲಿ ಜಿ.ಪಂ. ಸದಸ್ಯರ ಪ್ರಯತ್ನದಿಂದ ₨ 3 ಲಕ್ಷ ಅನುದಾನ ದೊರೆತಿದೆ. ಒಟ್ಟು ₨ 9 ಲಕ್ಷ ವೆಚ್ಚದಲ್ಲಿ ಸುಭಾಷ ನಗರಕ್ಕೆ ನೀರು ಸರಬರಾಜು ಮಾಡುವ ಕಾಮಗಾರಿ ಅತ್ಯಂತ ವಿಳಂಬವಾಗಿ ಮುಕ್ತಾಯವಾಗಿದೆ. ಆದರೆ ಬೇಸಿಗೆ ಮುಗಿ ಯುತ್ತ ಬಂದರೂ ಕಾಮಗಾರಿ ಉದ್ಘಾಟನೆ ಆಗಿಲ್ಲ.
‘ಬಿಸಲಕೊಪ್ಪದಲ್ಲಿ ನಾಲ್ಕು ನೀರಿನ ಯೋಜನೆ ಅನುಷ್ಠಾನಕ್ಕೆ ₨ 15 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ. ಆದರೆ ಇಡೀ ಊರಿಗೆ ನೀರು ಪೂರೈಸುವ ಕಾರ್ಯ ಸಾಧ್ಯವಾಗಿಲ್ಲ. ಅನುಷ್ಠಾ ನಕ್ಕೆ ಪೂರ್ವದಲ್ಲಿ ದೂರದೃಷ್ಟಿಯ ಕ್ರಿಯಾ ಯೋಜನೆ ರೂಪಿಸಿದರೆ ಸರ್ಕಾರದ ಹಣ ನಷ್ಟವಾಗುವುದು ತಪ್ಪುತ್ತದೆ’ ಎಂದು ಸ್ಥಳೀಯ ಎಸ್.ಜಿ.ಭಟ್ಟ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.