ADVERTISEMENT

ಬೆಳಕು ಕೊಡಿಸುವ ರಾಜೀವ ಗಾಂವಕರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 7:45 IST
Last Updated 8 ಏಪ್ರಿಲ್ 2012, 7:45 IST

ದೇಶ ಸುತ್ತಾಡಿ ಸುತ್ತಾಡಿ ಕೊನೆಗೆ ಬೇರು ಹುಡುಕಿಕೊಂಡು ಬಂದ ಈ ನೆಲದ ಯುವಕ ಇದೀಗ ಅದೆಷ್ಟೋ ಜನರ ಸೋತು ಹೋದ ಕಣ್ಣುಗಳಲ್ಲಿ ಬೆಳಕು ತುಂಬುವ ಕಾಯಕದಲ್ಲಿ ತೊಡಗಿಕೊಂಡಿರುವುದು ಯುವ ಸಮುದಾಯಕ್ಕೆ ಅಭಿಮಾನದ ಸಂಗತಿಯಾಗಿದೆ. ಯಾವತ್ತೂ ಬಡವರಿಗಾಗಿ, ಅಸಹಾಯಕರಿಗಾಗಿ ತುಡಿಯುವ ಈ ಯುವಕ ಇಂದು ತನ್ನ ಜಿಲ್ಲೆಯ ಜನರಿಗಾಗಿ ಕ್ಷಣ ಕ್ಷಣಕ್ಕೂ ಮಿಡಿಯುತ್ತಿರುವುದು ಆತನ ನಿಷ್ಕಳಂಕ ನಗುವಿನಲ್ಲಿ ಸ್ಪಷ್ಟವಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಿರೇಗುತ್ತಿಯ ರಾಜೀವ ಗಾಂವಕರ ಎಂಬ ಯುವಕ ತನ್ನದೇ ಆದ  ಆಶ್ರಯ ಫೌಂಡೇಶನ್  ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ತನ್ನ ಮಿತಿಯಲ್ಲಿ ಮೌನವಾಗಿ ಕೆಲಸ ಮಾಡುತ್ತಿದ್ದಾರೆ. ಯಾವ ಸ್ವಾರ್ಥದ ಹಪಹಪಿಕೆಯಿಲ್ಲದೇ ಕೇವಲ ಅಸಹಾಯಕರಿಗಾಗಿ ತುಡಿಯುತ್ತಿರುವ ರಾಜೀವ ನೊಂದವರಿಗಾಗಿ ಭರವಸೆಗಳ ಗೂಡು ಕಟ್ಟುತ್ತಿದ್ದಾರೆ. ನೇತ್ರದಾನ ಮಹಾದಾನ ಎಂಬ ಮಾತಿನಲ್ಲಿ ನಿಜವಾದ ಅರ್ಥ ಕಂಡುಕೊಂಡು ಕಣ್ಣಿಲ್ಲದವರ ಕಣ್ಣಾಗಲು ಪ್ರಯತ್ನಿಸುತ್ತಿದ್ದಾರೆ.

ನಮ್ಮ ನಡುವೆ ಎಷ್ಟೋ ಕುರುಡರು ಪ್ರಪಂಚ ನೋಡಲಾಗದೇ ನರಳುತ್ತಿರುವುದನ್ನು ನೋಡಿದ ರಾಜೀವ ಗಾಂವಕರ ಅಂಥವರ ಬದುಕಿನಲ್ಲಿ ಬೆಳಕು ಚೆಲ್ಲಲು ತಮ್ಮ ಆಶ್ರಯ ಫೌಂಡೇಶನ್ ಬಳಸಿಕೊಂಡಿದ್ದಾರೆ. ನೇತ್ರದಾನದ ಮಹತ್ವ ಮತ್ತು ಅದರಲ್ಲಡಗಿದ ಮಾನವೀಯತೆಯನ್ನು ಜನರಿಗೆ ತಿಳಿಸಿ ಜಾಗತಿ ಮೂಡಿಸಿ ಅವರಿಂದ  ಅವರ ಮರಣದ ನಂತರ ಕಣ್ಣುಗಳನ್ನು ದಾನ ಮಾಡಲು ಕೇಳಿಕೊಳ್ಳುತ್ತಿದ್ದಾರೆ. ಹಾಗೆ ನೇತ್ರದಾನಕ್ಕೆ ಒಪ್ಪಿಗೆ ನೀಡಿದವರು ವಯೋವೃದ್ಧರಾಗಿ ಕೊನೆಯುಸಿರೆಳೆದರೆ ಅಥವಾ ಅಕಸ್ಮಾತ್ ಅಪಘಾತದಲ್ಲಿಯೋ, ಮಾರಣಾಂತಿಕ ಕಾಯಿಲೆಯಿಂದಲೋ ಬದುಕಿನ ಪಯಣ ಮುಗಿಸಿದರೆ ಅಂಥವರ ಮನೆಗೆ ರಾಜೀವ ಗಾಂವಕರರೇ ಕಣ್ಣಿನ ವೈದ್ಯರನ್ನು ಜೊತೆಗೆ ಕರೆದುಕೊಂಡು ಹೋಗಿ ಕಣ್ಣುಗಳನ್ನುಸಂಗ್ರಹಿಸಿ ಬೆಂಗಳೂರಿನ  ಲಯನ್ಸ್ ಇಂಟರ್ ನ್ಯಾಷನಲ್ ಐ ಬ್ಯಾಂಕ್ ಗೆ ಕಳಿಸುತ್ತಾರೆ. ರಾಜೀವರಿಗೆ ತನ್ನ ಪ್ರಯತ್ನದಿಂದ ಕತ್ತಲೆ ತುಂಬಿಕೊಂಡ ಯಾವ್ಯಾವುದೋ ಕಣ್ಣುಗಳು ಬೆಳಕು ತುಂಬಿಕೊಳ್ಳುತ್ತವೆ ಎಂಬುದಷ್ಟೇ ಅವರಿಗೆ ಸಮಾಧಾನ. 

ಯಾವ ಜಾತಿ, ಧರ್ಮವನ್ನೂ ನೋಡದೇ ಕೇವಲ ಮನುಷ್ಯ ಮನುಷ್ಯನಿಗಾಗಿ ಬದುಕಬೇಕು ಎಂಬ ನಿಲುವಿನಲ್ಲಿ ನಂಬಿಕೆಯುಳ್ಳ ರಾಜೀವ ಗಾಂವಕರ ಅವರು ಇಂಥವರೆಲ್ಲರೊಂದಿಗೆ ಅಣ್ಣನಾಗಿ, ತಮ್ಮನಾಗಿ, ಗೆಳೆಯನಾಗಿ ಬೆರೆಯುತ್ತಾರೆ.

ಈಗ ಹುಟ್ಟೂರು ಹಿರೇಗುತ್ತಿಗೆ ಬಂದು ನೆಲೆಸಿದ ರಾಜೀವ ಗಾಂವಕರ ಅವರು ಅನಾಥರಿಗಾಗಿ, ಅಸಹಾಯಕರಿಗಾಗಿಯೇ ತಮ್ಮ ಬದುಕನ್ನು ತೇಯುತ್ತಿದ್ದಾರೆ. ಇತ್ತೀಚೆಗೆ ಹೆಪಟೈಟಿಸ್ ಕಾಯಿಲೆಯಿಂದ ನರಳುತ್ತಿದ್ದ ನಿರ್ಗತಿಕ ಹುಡುಗನೊಬ್ಬ ಬೀದಿ ಹೆಣವಾದಾಗ ಇದೇ ರಾಜೀವ್ ಅವನನ್ನು ಸ್ಮಶಾನಕ್ಕೆ ಒಯ್ದು ತಾವೇ ತಮ್ಮ ಕೈಯಿಂದ ಅವನ ಚಿತೆಗೆ ಬೆಂಕಿ ಇಟ್ಟು ಅಂತ್ಯಕ್ರಿಯೆ ನೆರವೇರಿಸಿದರು. ಕುಮಟಾದ ಬೀದಿಯಲ್ಲಿ ಮನೆಯವರಿಂದ ದೂರವಾದ ಅನಾಥ ವೃದ್ಧೆಯೊಬ್ಬಳು ಅತಂತ್ರಳಾಗಿ ಸುತ್ತಾಡುತ್ತಿರುವಾಗ ಆಕೆಗೆ ಚಿಕಿತ್ಸೆ ಕೊಡಿಸಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಅವಳಿಗೆ ಮಗನ ಪ್ರೀತಿ ನೀಡಿದರು.

44 ವಯಸ್ಸಿನ ರಾಜೀವ ಗಾಂವಕರ್ ಅವರು ಕನ್ನಡವನ್ನಷ್ಟೇ ಅಲ್ಲದೇ, ತೆಲಗು, ತಮಿಳು, ಮಳೆಯಾಳಂ, ಮರಾಠಿ, ಇಂಗ್ಲಿಷ್, ಹಿಂದಿ ಹೀಗೆ ಅದೆಷ್ಟೋ ಭಾಷೆಗಳನ್ನು ತಮ್ಮ ನಾಲಿಗೆಯ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ತಂದೆ ಹೊನ್ನಪ್ಪಯ್ಯ ಗಾಂವಕರ ಅವರು ಕೇಂದ್ರ ಸರ್ಕಾರದ ಸಿಬಿಐ ನಲ್ಲಿ ತನಿಖಾಧಿಕಾರಿಯಾಗಿ ಕೆಲಸ ಮಾಡಿದವರು. ಹಾಗಾಗಿ ಇವರಿಗೆ ದೇಶದ ಮೂಲೆ ಮೂಲೆಯ ಸಹವಾಸವಾಯ್ತು. ಬಿಎಸ್ಸಿ ಓದಿರುವ ರಾಜೀವ್ ಶಿಕ್ಷಣ ವಂಚಿತ ಮಕ್ಕಳಿಗೂ ಆಸರೆಯಾಗಲು ಮುಂದಾಗುತ್ತಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.