ADVERTISEMENT

ಭಟ್ಕಳ ತಾಲ್ಲೂಕು ಸಾಹಿತ್ಯ ಅಧ್ಯಕ್ಷರಾಗಿ ಸರಾಫ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 5:30 IST
Last Updated 12 ಜನವರಿ 2012, 5:30 IST
ಭಟ್ಕಳ ತಾಲ್ಲೂಕು ಸಾಹಿತ್ಯ ಅಧ್ಯಕ್ಷರಾಗಿ ಸರಾಫ್ ಆಯ್ಕೆ
ಭಟ್ಕಳ ತಾಲ್ಲೂಕು ಸಾಹಿತ್ಯ ಅಧ್ಯಕ್ಷರಾಗಿ ಸರಾಫ್ ಆಯ್ಕೆ   

ಭಟ್ಕಳ: ಇಲ್ಲಿನ ನ್ಯೂ ಇಂಗ್ಲೀಷ್ ಸ್ಕೂಲ್‌ನಲ್ಲಿ ಜ.27ರಂದು ನಡೆಯಲಿರುವ ಭಟ್ಕಳ ತಾಲ್ಲೂಕು 5ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಪತ್ರಕರ್ತ, ಅಂಕಣಕಾರ, ಸಂಪಾದಕ, ಸಮಾಜ ಸೇವಕ ಹಾಗೂ ವೃತ್ತಿಯಲ್ಲಿ ವೈದ್ಯರಾದ ಡಾ.ಆರ್.ವಿ.ಸರಾಫ್ ಆಯ್ಕೆಯಾಗಿದ್ದಾರೆ.

ಮಂಗಳವಾರ ನಡೆದ ಕ.ಸಾ.ಪ. ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಡಾ.ಸರಾಫ್‌ರನ್ನು ಸಮ್ಮೇಳನಾಧ್ಯಕ್ಷ ರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಮೂಲತ: ತಾಲ್ಲೂಕಿನ ಶಿರಾಲಿಯವರಾದ ಸರಾಫ್‌ರು 1952ನೇ ಮೇ.20ರಂದು ವೆಂಕಟೇಶ ರಾವ್ ದಂಪತಿಯ 2ನೇ ಮಗನಾದ ಇವರು ಪ್ರಾಥಮಿಕ ಮತ್ತ ಪ್ರೌಢಶಿಕ್ಷಣ ವನ್ನು ಶಿರಾಲಿಯಲ್ಲಿ,ಕಾಲೇಜು ಶಿಕ್ಷಣ ವನ್ನು ಮುಂಬೈನಲ್ಲಿ, ವೈದ್ಯಕೀಯ ಶಿಕ್ಷಣವನ್ನು ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ 1976ರಲ್ಲಿ ಪೂರ್ಣ ಗೊಳಿಸಿ ಶಿರಾಲಿಯಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು.

ವೃತ್ತಿಯಲ್ಲಿ ವೈದ್ಯರಾಗಿದ್ದರೂ ಇವರ ಆಸಕ್ತಿಯೆಲ್ಲಾ ಸಮಾಜ ಸೇವೆ ಯೆಡೆಗೆ. ಸಾಹಿತ್ಯಾಸಕ್ತರಾಗಿದ್ದ ಡಾ.ಸರಾಫ್‌ರು ಆರಂಭದಲ್ಲಿ ಕಥೆ, ಕವನ, ಚುಟುಕು ಬರೆಯುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1980ರಲ್ಲಿ ಹವ್ಯಾಸಿ ಬರಹಗಾರರಾಗಿ ಪತ್ರಿಕಾ ಪ್ರಪಂಚಕ್ಕೆ ಕಾಲಿಟ್ಟ ಅವರು ಬರೆದ ಹಲವು ಲೇಖನ,  ಕಥೆ ಕವನ, ಅಂಕಣಗಳು ನಾಡಿನ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.

1982ರಲ್ಲಿ ತಾಲ್ಲೂಕುಮಟ್ಟದ `ಸಂಚಯ~ವಾರ ಪತ್ರಿಕೆ,1984ರಲ್ಲಿ ಜಿಲ್ಲಾಮಟ್ಟದ `ಕಡಲಗಾಳಿ~ಹಾಗೂ ರಾಜ್ಯಮಟ್ಟದ `ಬೆಳಕಿಂಡಿ~ ಮಾಸಪತ್ರಿಕೆ ಯನ್ನು ಹೊರತಂದು ಏಕಕಾಲದಲ್ಲಿ ತಾಲ್ಲೂಕು,ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪತ್ರಿಕೆಯನ್ನು ಪ್ರಕಟಿಸುತ್ತಿ ರುವ ಏಕೈಕ ಉತ್ತರ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸುಮಾರು 1 ವರ್ಷಗಳವರೆಗೆ ನಿರಂತರವಾಗಿ ಪ್ರಕಟ ಗೊಂಡ ಇವರ ಪತ್ರಿಕೆಗಳಲ್ಲಿ ಅಸಂಖ್ಯಾತ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಡಾ.ಸರಾಫ್‌ರಿಗೆ ಸಲ್ಲುತ್ತದೆ.

ಸಂಘಟನಾ ಚತುರರೂ ಆದ ಡಾ.ಸರಾಫ್‌ರು ತಮ್ಮ ವೃತ್ತಿಯ ಜತೆಗೆ ಮಕ್ಕಳ ಬೇಸಿಗೆ ಶಿಬಿರ,ನವೋದಯ ಪೂರ್ವಸಿದ್ದತಾ ಅಭ್ಯಾಸವರ್ಗ, ಪಲ್ಸ ಪೋಲಿಯೋ,ಪ್ಲಾಸ್ಟಿಕ್ ನಿರ್ಮೂಲನೆ, ಬೀದಿ ನಾಟಕ, ಆರೋಗ್ಯ ಶಿಬಿರ, ಯೋಗಾಸನ, ಉಪನ್ಯಾಸಕ ಕಾರ್ಯ ಕ್ರಮ, ಪರಿಸರ ರಕ್ಷಣೆಯಂಥಹ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಇವರು ಶಿರಾಲಿಯಲ್ಲಿ ಸ್ಥಾಪಿಸಿರುವ ಮಕ್ಕಳ ಯಕ್ಷಗಾನ ಮೇಳ ರಾಜ್ಯದ ನಾನಾ ಕಡೆ 50ಕ್ಕೂ ಹೆಚ್ಚು ಪ್ರದರ್ಶನ ಕಂಡು ಪ್ರಶಸ್ತಿಗಳನ್ನು ಪಡೆದು ಕೊಂಡಿದೆ.

`ಶಾಲೆಗೆ ಹೊಸ ಮೇಷ್ಟ್ರು ಬಂದಿದ್ದಾರೆ~ ನಾಟಕ ಕೃತಿ, ಪ್ರಸಾದ,, ಮಾಹೆ ಎಂಬ ಸಣ್ಣಕಥಾ ಸಂಕಲನ, ಅಂದ ವ್ಯಕ್ತಿತ್ವಕ್ಕೆ ಸಣ್ಣ ಪಂಚಾಂಗ ಎಂಬ ವಿಚಾರ ಲೇಖನ,ಹೆಜ್ಜೆ ಇಡೋಣ ಜ್ಞಾನದ ಕಡೆಗೆ ಎಂಬ ವೈಚಾರಿಕ ಲೇಖನ,ಗಣಿಧೂಳಿನೊಳಗಿನ ಚುಟುಕುಗಳು,ಸ್ವಾಸ್ಥ್ಯ ಮಹಾಬಲ, ನಗಿಸ್ತಾನೆ ನಕ್ಕೀರಪ್ಪ ಇವರ ಪ್ರಮುಖ ಕೃತಿಗಳಾಗಿದೆ.

ಜೋಯಿಡಾದಲ್ಲಿ ನಡೆದ 12ನೇ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ,   ಏಡ್ಸ್ ಬಗ್ಗೆ ಕನ್ನಡದಲ್ಲಿ ಮೊದಲ ಪುಸ್ತಕ ಬರೆದ ಹೆಗ್ಗಳಿಕೆಗೆ ಪ್ರಶಸ್ತಿ, ಭಾರತೀಯ ವೈದ್ಯಕೀಯ ಸಂಘದ ಉತ್ತಮ ಕಾರ್ಯದರ್ಶಿ, ಲಯನ್ಸ ಕ್ಲಬ್ ಉತ್ತಮ ವಲಯಾಧ್ಯಕ್ಷ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಡಾ.ಸರಾಫ್‌ರು ಪಡೆದುಕೊಂಡಿದ್ದಾರೆ.

ಸಮ್ಮೆಳನಾಧ್ಯಕ್ಷರ ಆಯ್ಕೆ ಸಭೆಯಲ್ಲಿ ಸಾಹಿತಿ ಡಾ.ಝಮೀರುಲ್ಲಾ ಷರೀಫ್, ನಿಕಟಪೂರ್ವ ಸಮ್ಮೇಳ ನಾಧ್ಯಕ್ಷ ಪಿ.ಆರ್.ನಾಯ್ಕ,   ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ  ಶ್ರೀಧರ ಶೇಟ್, ಖಜಾಂಚಿ ಹೇರಂಭ ಹೆಗಡೆ, ಮಾನಾ ಸುತ ಶಂಭು ಹೆಗಡೆ, ಪ್ರೊ.ಆರ್.ಎಸ್. ನಾಯ್ಕ, ಚುಟುಕು ಕವಿ ಉಮೇಶ ಮುಂಡಳ್ಳಿ,    ಡಾ.ನಾರಾಯಣ ಮಧ್ಯಸ್ಥ,     ಜಿ.ಹೆಚ್ ವಾಸುದೇವ, ಗಣೇಶ ಯಾಜಿ, ಗಣೇಶ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.