ADVERTISEMENT

`ಮರಣ ಶಾಸನವಾದ ನಬಾರ್ಡ್ ಸುತ್ತೋಲೆ'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 7:10 IST
Last Updated 5 ಸೆಪ್ಟೆಂಬರ್ 2013, 7:10 IST

ಅಂಕೋಲಾ: ವ್ಯವಸಾಯ ಸಹಕಾರಿ ಸಂಘಗಳಗಳನ್ನು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ನಿಯಂತ್ರಣಕ್ಕೆ ಒಳಪಡಿಸುವಂತೆ ನಬಾರ್ಡ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವುದು ವ್ಯವಸಾಯ ಸಹಕಾರಿ ಸಂಘಗಳಿಗೆ ಮರಣಶಾಸನವಾಗಿದೆ' ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಸಿ. ಭಯ್ಯೊರೆಡ್ಡಿ ಹೇಳಿದರು.

ಪಟ್ಟಣದ ತಾ.ಪಂ. ಸಭಾಭವನದಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ನಬಾರ್ಡ್ ಸುತ್ತೋಲೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

`ನಬಾರ್ಡ್‌ನ ಈ ಸುತ್ತೋಲೆಯನ್ನು ಕಾರ್ಯರೂಪಕ್ಕೆ ತರಲು ಅಸಾಧ್ಯವೆಂದು ಗುಜರಾತ ಮತ್ತು ಕೇರಳ ರಾಜ್ಯ ಸರ್ಕಾರಗಳು ಈಗಾಗಲೇ ಸ್ಪಷ್ಟೀಕರಣ ನೀಡಿವೆ. ಕರ್ನಾಟಕ ಸರ್ಕಾರ ಮಾತ್ರ ಈ ಕುರಿತು ದಿವ್ಯ ಮೌನ ವಹಿಸಿರುವುದು ರೈತರಲ್ಲಿ ಕಳವಳ ಮೂಡಿಸಿದೆ. ಈ ಕೂಡಲೇ ರಾಜ್ಯ ಸರ್ಕಾರ ನಬಾರ್ಡ ನಿರ್ದೇಶನ ಧಿಕ್ಕರಿಸಿ ವ್ಯವಸಾಯ ಸಹಕಾರಿ ಸಂಘಗಳ ಮೇಲೆ ಕವಿದಿರುವ ಆತಂಕದ ಮೋಡವನ್ನು ಚದುರಿಸಬೇಕು. ಇಲ್ಲದಿದ್ದರೆ ಆ ಕೆಲಸವನ್ನು ರಾಜ್ಯದ ರೈತ ಸಮುದಾಯ ಕೈಗೆತ್ತಿಕೊಳ್ಳಬೇಕಾಗುತ್ತದೆ' ಎಂದು ಹೇಳಿದರು. 

`ನಬಾರ್ಡ್‌ನ ಸೂಚನೆ ಪಾಲಿಸಿದರೆ ರೈತರ ಜೊತೆಗೆ ವ್ಯವಸಾಯ ಸಹಕಾರ ಸಂಘಗಳಲ್ಲಿ ಸೇವೆ ಸಲ್ಲಿಸುತ್ತಿರುವ 25 ಸಾವಿರಕ್ಕೂ ಹೆಚ್ಚು ಕಾರ್ಯದರ್ಶಿಗಳು, ಗುಮಾಸ್ತರು, ಜವಾನರು ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ' ಎಂದು ರೆಡ್ಡಿ ವಿವರಿಸಿದರು.

ಕರ್ನಾಟಕ ಪ್ರಾಂತ ರೈತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ ನಬಾರ್ಡ್‌ನ ಸುತ್ತೋಲೆಯ ಸಾಧಕ-ಬಾಧಕಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಸಿ.ಸಿ. ಉಪಾಧ್ಯಕ್ಷ ಡಿ.ಎನ್. ನಾಯಕ, ಶಾಂತಾರಾಮ ನಾಯಕ ಹಿಚ್ಕಡ, ಎಸ್.ಎಂ. ವೈದ್ಯ, ಉದಯ ಡಿ. ನಾಯ್ಕ, ಜಯರಾಮ ನಾಯಕ, ರಾಮಚಂದ್ರ ನಾಯಕ, ರಾಮಕಷ್ಣ ನಾಯಕ ಸೂರ್ವೆ, ರಮಾನಂದ ನಾಯಕ   ಮಾತನಾಡಿದರು.

ಸಭೆಯಲ್ಲಿ ಸಹಕಾರಿ ಸಂಘದ ಪ್ರಮುಖರಾದ ರಾಕು ನಾಯಕ, ಗುರು ನಾಯಕ, ರಮಾನಂದ ನಾಯಕ ಅಚವೆ, ಬೊಮ್ಮಯ್ಯ ನಾಯಕ, ಕಷ್ಣ ನಾಯ್ಕ ಇತರರಿದ್ದರು. ಪ್ರಾಂತ ರೈತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗೌರೀಶ ನಾಯಕ ಸ್ವಾಗತಿಸಿದರು.

ಮನವಿ ಸಲ್ಲಿಸಲು ನಿರ್ಧಾರ: ನಬಾರ್ಡ್ ಸುತ್ತೋಲೆಯನ್ನು ವಿರೋಧಿಸಿ ಮತ್ತು ಇದಕ್ಕೆ ರಾಜ್ಯ ಸರ್ಕಾರದ ಪ್ರತಿಕ್ರಿಯೆಯನ್ನು ದಾಖಲಿಸುವಂತೆ ಒತ್ತಾಯಿಸಿ ತಾಲೂಕಿನ ಎಲ್ಲಾ ಸಹಕಾರಿ ಬ್ಯಾಂಕ್‌ಗಳು ಸೆ. 6ರಂದು ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಿವೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಅಂದು ಬೆಳಿಗ್ಗೆ 11 ಗಂಟೆಗೆ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳು ಮತ್ತು ಸಹಕಾರ ಸಚಿವರಿಗೆ ಮನವಿ ಸಲ್ಲಿಸಲು ನಿರ್ಣಯವನ್ನು ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.