ಕಾರವಾರ: ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ರಕ್ಷಣೆ ಮಾತ್ರವಲ್ಲ ಸ್ವತಃ ಆರೋಗ್ಯ ಕಾಪಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಬ್ರಾಯ ಕಾಮತ್ ಹೇಳಿದರು.
ನಗರದ ಬಾಡ ಶಿವಾಜಿ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ರಕ್ತದಾನಿ ಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಟ್ಟು ಸ್ವಯಂಪ್ರೇರಿತ ರಕ್ತದಾನದಲ್ಲಿ ಮಹಿಳೆ ಯರ ಪ್ರಮಾಣ ಕೇವಲ ಶೇ.10ರಷ್ಟು ಮಾತ್ರ ಎಂದು ವರದಿಗಳು ತಿಳಿಸಿದೆ ಎಂದ ಅವರು, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ರಕ್ತದಾನ ಸಂಪೂರ್ಣ ಸುರಕ್ಷಿತವಾಗಿದ್ದು, ರಕ್ತದಾನ ಮಾಡಿದ ಎರಡು ದಿನಗಳ ಒಳಗಾಗಿ ದೇಹದಲ್ಲಿ ಹೊಸದಾಗಿ ರಕ್ತ ಉತ್ಪಾದನೆ ಯಾಗುತ್ತದೆ ಎಂದ ಕಾಮತ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕ್ ಕುಮಾರ ಪ್ರಾಸ್ತಾವಿಕ ಮಾತನಾಡಿ, ದೇಶದಲ್ಲಿ ಪ್ರತಿ ಎರಡು ಸೆಕಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇದೆ. ಪ್ರತಿ ದಿನ 38 ಸಾವಿರಕ್ಕೂ ಹೆಚ್ಚು ಯುನಿಟ್‌ನಷ್ಟು ರಕ್ತ ದಾನದ ಅಗತ್ಯವಿದೆ ಎಂದರು.
ದೇಶದಲ್ಲಿ ವಾರ್ಷಿಕ 80ಲಕ್ಷ ಯುನಿಟ್‌ನಷ್ಟು ರಕ್ತದ ಅಗತ್ಯ ಇದ್ದು ಕೇವಲ 56ಲಕ್ಷ ಯುನಿಟ್‌ನಷ್ಟು ರಕ್ತ ಮಾತ್ರ ಸ್ವಯಂ ಪ್ರೇರಿತ ರಕ್ತದಾನಿ ಗಳಿಂದ ಸಂಗ್ರಹಿಸಿದರೆ, ಉಳಿದ ಭಾಗವನ್ನು ಕುಟುಂಬದ ಸದಸ್ಯರಿಂದ ಅಥವಾ ಬದಲಿ ದಾನಿಗಳಿಂದ ಸಂಗ್ರಹಿಸಲಾಗುತ್ತಿದೆ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ರಕ್ತದಾನ ಪ್ರತಿ ವರ್ಷ ಸಾವಿರಾರು ರೋಗಿಗಳ ಪ್ರಾಣ ಉಳಿಸಲು ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 176ರಕ್ತ ನಿಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಅಂತಹ 5ಕೇಂದ್ರಗಳು ಇವೆ. ಅದರಲ್ಲಿ ಎರಡು ಸರ್ಕಾರಿ ರಕ್ತ ನಿಧಿ ಕೇಂದ್ರಗಳಾಗಿದ್ದು, ಉಳಿದ ಮೂರು ಖಾಸಗಿ ರಕ್ತ ನಿಧಿಗಳಾಗಿವೆ. ಜಿಲ್ಲೆಯಲ್ಲಿ ಕಳೆದ ವರ್ಷ 4138 ಯುನಿಟ್‌ನಷ್ಟು ರಕ್ತವನ್ನು ಸಂಗ್ರಹಿಸಲಾಗಿದೆ ಎಂದರು.
ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳ ಮೂಲಕ 2268 ಮತ್ತು 1870ಯುನಿಟ್‌ನಷ್ಟು ರಕ್ತವನ್ನು ಬದಲಿ ವ್ಯವಸ್ಥೆ ಮೂಲಕ ಸಂಗ್ರಹಿಸಲಾಗಿದೆ. ಕಳೆದ ವರ್ಷ 29 ಸ್ವಯಂಪ್ರೇರಿತ ರಕ್ತದಾನ ಶಿಬಿರ ಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ಶಿವಾಜಿ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಶಿವಾನಂದ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಸೊಸೈಟಿ ಉಪಾಧ್ಯಕ್ಷ ನಜೀರ್ ಅಹ್ಮದ್ ಶೇಖ್, ಡಾ.ಗಣೇಶ್, ಪವಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.