ADVERTISEMENT

ಲೋಂಡಾ-ತಾಳಗುಪ್ಪ ರೈಲು ಮಾರ್ಗಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 6:57 IST
Last Updated 18 ಜುಲೈ 2013, 6:57 IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ತಾಳಗುಪ್ಪ ಮೂಲಕ ಶಿರಸಿ ಮಾರ್ಗವಾಗಿ ಲೋಂಡಾ ಜಂಕ್ಷನ್ ಸಂಪರ್ಕ ಕಲ್ಪಿಸುವ ಲೋಂಡಾ-ಅಳ್ನಾವರ್-ತಾಳಗುಪ್ಪ ರೈಲು ಮಾರ್ಗದ ಸಮೀಕ್ಷೆ ನಡೆಸಬೇಕು ಎಂದು ಕೇಂದ್ರದ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಗಿದೆ.

ಇತ್ತೀಚೆಗೆ ಖಾನಾಪುರದ ಲೋಂಡಾಕ್ಕೆ ಭೇಟಿ ನೀಡಿದ್ದ ಸಚಿವರಿಗೆ ಲೋಂಡಾ ಜಂಕ್ಷನ್-ತಾಳಗುಪ್ಪ ರೈಲು ಮಾರ್ಗ ಸಮನ್ವಯ ಸಮಿತಿ ಮನವಿ ನೀಡಿದೆ. ಘಟ್ಟದ ಕೆಳಗಿನ ತಾಲ್ಲೂಕುಗಳು ಕೊಂಕಣ ರೈಲು ಸಂಪರ್ಕದಿಂದ ಅಭಿವೃದ್ಧಿ ಸಾಗಿದ್ದು, ಅದೇ ರೀತಿ ವಾಣಿಜ್ಯೋದ್ಯಮಕ್ಕೆ ಅನುಕೂಲವಾಗುವ ರೈಲು ಸಂಪರ್ಕವನ್ನು ಘಟ್ಟದ ಮೇಲಿನ ತಾಲ್ಲೂಕುಗಳಿಗೂ ಕಲ್ಪಿಸಬೇಕು. ಪ್ರವಾಸೋದ್ಯಮಕ್ಕೆ ಪೂರಕ ಪರಿಸರ ಹೊಂದಿರುವ ಈ ಪ್ರದೇಶದಲ್ಲಿ ರೈಲು ಸಂಪರ್ಕ ವ್ಯವಸ್ಥೆ ಒದಗಿಸಿದರೆ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ.

ಲೋಂಡಾ ಜಂಕ್ಷನ್-ತಾಳಗುಪ್ಪ ರೈಲು ಮಾರ್ಗದ ಸರ್ವೆ ನಡೆಸಿ ಮುಂದಿನ ಆಯವ್ಯಯದಲ್ಲಿ ಮಾರ್ಗ ನಿರ್ಮಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಹಾಗೂ ರಾಜ್ಯ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ, ಕಾರ್ಯಾಧ್ಯಕ್ಷ ಮಾಧವ ರೇವಣಕರ ರೈಲ್ವೆ ಖಾತೆ ಸಚಿವರಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸೂಚಿತ ರೈಲು ಮಾರ್ಗದಿಂದ ಅರಣ್ಯ ಪ್ರದೇಶಕ್ಕೆ ಹೆಚ್ಚಿನ ಧಕ್ಕೆಯಾಗುವುದಿಲ್ಲ. ಈ ಕಾರಣಕ್ಕಾಗಿ ಮಲೆನಾಡು ಎಕ್ಸ್‌ಪ್ರೆಸ್ ಸಂಚಾರದ ಕನಸನ್ನು ನನಸು ಮಾಡುವುದಕ್ಕೆ ರೈಲ್ವೆ ಸಚಿವರು ಸ್ಪಂದಿಸುವ ಭರವಸೆ ಇದೆ ಎಂದು ಮನವಿ ನೀಡುವ ಸಂದರ್ಭದಲ್ಲಿ ಹಾಜರಿದ್ದ ಮಾಧವ ರೇವಣಕರ, ಪಿ.ಎನ್.ಜೋಗಳೇಕರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.