ADVERTISEMENT

ವರದೆ ಒಡಲಿಂದ ಗುಳ್ಳೆಗಳು!

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2012, 10:35 IST
Last Updated 28 ಏಪ್ರಿಲ್ 2012, 10:35 IST

ಶಿರಸಿ: ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ ಹರಿಯುವ ವರದಾ ನದಿಯ ನೀರಿನಲ್ಲಿ ವಿಚಿತ್ರ ಗುಳ್ಳೆಗಳು ಏಳುತ್ತಿವೆ. ತಿಗಣಿ ಸಮೀಪ ಕವಲುಹೊಳೆ ಪ್ರದೇಶದಲ್ಲಿ ನಾಲ್ಕು ದಿನಗಳಿಂದ ಒಂದೇ ಸವನೆ ನೀರಗುಳ್ಳೆಗಳು ಕಂಡು ಬರುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಪ್ರತಿ ವರ್ಷ ಬೇಸಿಗೆ ಬರುತ್ತಿದ್ದಂತೆ ಬತ್ತಿ ಹೋಗುವ ವರದಾ ನದಿಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರಿದೆ. ಮೂರು ಅಡಿ ನೀರು ಹರಿಯುವ ನದಿಯ ಅಂದಾಜು 50 ಮೀಟರ್ ವ್ಯಾಪ್ತಿಯಲ್ಲಿ ಸುಮಾರು 25-30 ಕಡೆಗಳಲ್ಲಿ ನೀರಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಗುಳ್ಳೆ ಚಿಮ್ಮುವ ಭಾಗದಲ್ಲಿ ಮಾತ್ರ ನೀರು ತುಸು ಬಿಸಿ ಇದ್ದು, ಕೈ ಇಟ್ಟರೆ ಕೈ ಮೇಲಕ್ಕೆ ನೂಕಿದ ಅನುಭವ ಉಂಟಾಗುತ್ತದೆ. ಈ ವೈಚಿತ್ರ್ಯ ಕಂಡ ಗ್ರಾಮಸ್ಥರು ಗುಳ್ಳೆ ಏಳುವ ಸ್ಥಳದಲ್ಲಿ ಕಾಲಿಟ್ಟು ನೋಡಿದ್ದಾರೆ. ನೆಲ ಮಟ್ಟದಿಂದಲೇ ಗುಳ್ಳೆ ಹುಟ್ಟಿ ಬರುತ್ತಿರುವುದು ಅವರ ಗಮನಕ್ಕೆ ಬಂದಿದೆ. ವರದಾ ನದಿ ಬನವಾಸಿ ಭಾಗದಲ್ಲಿ ಎಂಟು ಕಿ.ಮೀ. ವ್ಯಾಪ್ತಿಯಲ್ಲಿ ಹರಿಯುತ್ತಿದ್ದರೂ, ತಿಗಣಿ ಭಾಗದಲ್ಲಿ ಮಾತ್ರ ಇಂತಹ ಗುಳ್ಳೆಗಳು ಕಾಣಿಸಿಕೊಂಡಿವೆ. ನಾಲ್ಕು ದಿನಗಳಿಂದ ನಿರಂತರ ಏಳುವ ಗುಳ್ಳೆ ನೋಡಲು ಜನ ಕುತೂಹಲದಿಂದ ಬರುತ್ತಿದ್ದಾರೆ. ಇದ್ದಕ್ಕಿದ್ದಂತೆ ನದಿಯ ಹರಿವಿನಲ್ಲಿ ಇಂತಹ ಗುಳ್ಳೆಗಳು ಏಳಲು ಕಾರಣ ಏನು ಎಂಬುದು ಗೊತ್ತಾಗಬೇಕಾಗಿದೆ.

ಭೂಗರ್ಭ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಕೆ.ವಿ.ಭಟ್ಟ ಅವರ ಪ್ರಕಾರ ನೀರಿನ ತಳ ಮಟ್ಟದಲ್ಲಿ ಕ್ಯಾಲ್ಸಿಯಂ ಪ್ರಮಾಣ ಇದ್ದರೆ ಇಂತಹ ಗುಳ್ಳೆಗಳು ಏಳುತ್ತವೆ. ನೀರಿನ ತಳದಲ್ಲಿ ಕಲ್ಲಿನ ಪದರಗಳಿದ್ದರೆ ಕ್ರಮೇಣ ಅವುಗಳ ಸವಕಳಿಯಿಂದ ಮಧ್ಯೆ ಸಣ್ಣ ತೂತು ನಿರ್ಮಾಣವಾಗುತ್ತದೆ. ಅಂತಹ ಬಿರುಕಿನಲ್ಲಿ ಗಾಳಿ ಸಂಚಾರವಾದಾಗಲೂ ಗುಳ್ಳೆಗಳು ಏಳುವ ಸಾಧ್ಯತೆಗಳಿರುತ್ತವೆ. ಆದರೆ ಅದನ್ನು ಪರಿಶೀಲಿಸಿದಾಗ ಮಾತ್ರ ಸ್ಪಷ್ಟ ಕಾರಣ ಕಂಡುಕೊಳ್ಳಲು ಸಾಧ್ಯ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.