ADVERTISEMENT

ವಾಯುಕುಸಿತ; ಲಂಗರು ಹಾಕಿದ ಹಡಗು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 7:32 IST
Last Updated 16 ಮಾರ್ಚ್ 2018, 7:32 IST
ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ಲಂಗರು ಹಾಕಿರುವ ತಮಿಳುನಾಡಿನ ಬೋಟುಗಳು
ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ಲಂಗರು ಹಾಕಿರುವ ತಮಿಳುನಾಡಿನ ಬೋಟುಗಳು   

ಕಾರವಾರ: ಶ್ರೀಲಂಕಾದ ದಕ್ಷಿಣ ಕರಾವಳಿ ಮತ್ತು ಮಾಲ್ಡೀವ್ಸ್ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಇಲ್ಲಿನ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ಹಾಗೂ ಜಿಲ್ಲೆಯ ಕರಾವಳಿ ಪ್ರದೇಶದ ಬಂದರುಗಳಲ್ಲಿ ತಮಿಳುನಾಡಿನ ಹಡ‌ಗುಗಳು ಲಂಗರು ಹಾಕಿವೆ.

ವಾಯುಭಾರ ಕುಸಿತದಿಂದ ಉಂಟಾಗುವ ಚಂಡಮಾರುತವು ಅರಬ್ಬಿ ಸಮುದ್ರದ ವಾಯವ್ಯ ದಿಕ್ಕಿನಲ್ಲಿ ಚಲಿಸಿ ದುರ್ಬಲಗೊಳ್ಳಲಿದ್ದು, ಇದು ದಕ್ಷಿಣ ಕೇರಳ ಹಾಗೂ ದಕ್ಷಿಣ ತಮಿಳುನಾಡಿನ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ಅಲ್ಲಿಂದ ಮೀನುಗಾರಿಕೆಗಾಗಿ ತೆರಳಿದ್ದ ಬೋಟುಗಳು ಇಲ್ಲಿನ ತೀರಗಳಲ್ಲಿ ಲಂಗರು ಹಾಕಿವೆ.

‘ಜಿಲ್ಲೆಯ ಕರಾವಳಿ ಭಾಗದಲ್ಲಿ ಅಷ್ಟೇನು ಪ್ರಭಾವ ಬೀರುವುದಿಲ್ಲ. ಆದರೆ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತ ಇಲ್ಲಿಯವರೆಗೆ ಬಂದಿದ್ದ ತಮಿಳುನಾಡಿನ ಹಡಗುಗಳು ಹವಾಮಾನ ಇಲಾಖೆಯ ಸೂಚನೆಯಂತೆ ಇಲ್ಲಿ ಲಂಗರು ಹಾಕಿವೆ’ ಎಂದು ಮೀನುಗಾರ ಮುಖಂಡ ರಾಜು ತಾಂಡೇಲ ತಿಳಿಸಿದರು.

ADVERTISEMENT

ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಕೊಪ್ಪದ್ ಮಾತನಾಡಿ, ‘ಜಿಲ್ಲೆಯ ಮೀನುಗಾರರಿಗೆ ಆಳ ಸಮುದ್ರದ ಮೀನುಗಾರಿಕೆ ನಡೆಸಬಾರದು ಎಂದು ಮಾತ್ರ ಇಲಾಖೆ ಮುನ್ಸೂಚನೆ ನೀಡಿದೆ. ಉಳಿದಂತೆ ತಮಿಳುನಾಡು ಮೂಲದ ಸುಮಾರು 50ಕ್ಕಿಂತ ಹೆಚ್ಚಿನ ಬೋಟುಗಳು ಇಲ್ಲಿನ ಬಂದರು ಹಾಗೂ ಟ್ಯಾಗೋರ್ ಕಡಲತೀರಗಳಲ್ಲಿ ಲಂಗರು ಹಾಕಿವೆ. ಹೆಚ್ಚೆಂದರೆ ಎರಡು ದಿನಗಳವರೆಗೆ ಅವು ಇಲ್ಲಿದ್ದು, ವಾತಾವರಣ ಸರಿಯಾಗುತ್ತಿದ್ದಂತೆ ವಾಪಾಸ್ಸಾಗಲಿದೆ’ ಎಂದರು.

‘ಗಂಟೆಗೆ 15 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮಾಹಿತಿ ಬಂದಿದೆ. ಇದು ಅಷ್ಟೇನು ತೀವ್ರತರವಾದ ಪ್ರಭಾವ ಬೀರುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.