ADVERTISEMENT

`ಸಮುದಾಯ ಭವನಕ್ಕೆ ಕೋಟಿ ರೂ.'

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2012, 6:57 IST
Last Updated 28 ಡಿಸೆಂಬರ್ 2012, 6:57 IST
ಕಾರವಾರದ ಮಯೂರವರ್ಮ ವೇದಿಕೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಆನಂದ ಅಸ್ನೋಟಿಕರ್ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಸ್ಮರಣಿಕೆ ನೀಡಿದರು.
ಕಾರವಾರದ ಮಯೂರವರ್ಮ ವೇದಿಕೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಆನಂದ ಅಸ್ನೋಟಿಕರ್ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಸ್ಮರಣಿಕೆ ನೀಡಿದರು.   

ಕಾರವಾರ: `ಕೊಂಕಣ ಮರಾಠ ಹಾಗೂ ಕೋಮಾರಪಂಥ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗುವುದು' ಎಂದು ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.

ಇಲ್ಲಿಯ ಮಯೂರವರ್ಮ ವೇದಿಕೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ಕ್ಷೇತ್ರದಲ್ಲಿ ಇತರೆ ಸಮುದಾಯದವರು ಸಮುದಾಯ ಭವನಕ್ಕೆ ಬೇಡಿಕೆ ಇಟ್ಟರೆ ಅನುದಾನ ದೊರಕಿಸಿಕೊಡಲು ಪ್ರಯತ್ನ ಮಾಡುತ್ತೇನೆ' ಎಂದರು.

`ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎನ್ನುವ ಪ್ರಸ್ತಾವವನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿದೆ. ಈ ಕುರಿತು ಮುಖ್ಯಮಂತ್ರಿಯವರು ಪ್ರಧಾನಮಂತ್ರಿಗಳ ಮೇಲೆ ಮತ್ತಷ್ಟು ಒತ್ತಡ ತಂದು ಹಾಲಕ್ಕಿ ಸಮುದಾಯದ ದಶಕಗಳ ಬೇಡಿಕೆ ಈಡೇರಿಸಬೇಕು' ಎಂದು ಮನವಿ ಮಾಡಿದರು.

`ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಮತ್ತು ಕ್ಷೇತ್ರದ ಹಿಂದುಳಿದವರ ಅಭಿವೃದ್ಧಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೊಸಾಳಿ-ಮುಡಗೇರಿ ಕುಡಿಯುವ ನೀರಿನ ಯೋಜನೆ ಮುಕ್ತಾಯದ ಹಂತದಲ್ಲಿದೆ. ಕೆರವಡಿ-ಶಿರವಾಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಹಂತದಲ್ಲಿದೆ' ಎಂದು ಅವರು ಹೇಳಿದರು.

`ಅಂಕೋಲಾ ತಾಲ್ಲೂಕಿನ ಬೆಳಂಬರ, ಬೇಲೆಕೇರಿ, ಕೇಣಿ ಕಾರವಾರ ತಾಲ್ಲೂಕಿನ ಅಮದಳ್ಳಿ ಬಂದು ಅಭಿವೃದ್ಧಿಗೆ ಆರ್ಥಿಕ ನೆರವು ನೀಡಲಾಗಿದೆ' ಎಂದು ಅಸ್ನೋಟಿಕರ್ ಹೇಳಿದರು.

`ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣ ಆಗುತ್ತಿದೆ. ಈಗಾಗಲೇ  22 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದೆ. ಉತ್ತಮ ದರ್ಜೆಯ ಕಾಲೇಜು ಇಲ್ಲಿ ಸ್ಥಾಪನೆ ಆಗಲಿದೆ ಎನ್ನುವ ವಿಶ್ವಾಸ ನನಗಿದೆ' ಎಂದು ಅಸ್ನೋಟಿಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.