ADVERTISEMENT

ಸುಮಂಗಲಿಯರಿಂದ ಕುಂಕುಮಾರ್ಚನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 10:35 IST
Last Updated 18 ಅಕ್ಟೋಬರ್ 2012, 10:35 IST

ಶಿರಸಿ: ಶರನ್ನವರಾತ್ರಿಯ ಎರಡನೇ ದಿನ ನಗರದ ಅಂಬಾಗಿರಿಯ ಕಾಳಿಕಾ ಮಂದಿರದಲ್ಲಿ 200ಕ್ಕೂ ಹೆಚ್ಚು ಸುಮಂಗಲಿಯರು ಭಕ್ತಿ ಭಾವದಿಂದ ದೇವಿಗೆ ಕುಂಕುಮಾರ್ಚನೆ ಸೇವೆ ಸಲ್ಲಿಸಿದರು.

ಮಠಕ್ಕೆ ಆಗಮಿಸಿದ ಭಕ್ತರಿಗೆ ಸ್ವಯಂ ಸೇವಕರು ಶಬರಿ ಸೇವೆ ಒದಗಿಸಿದರು. ಕೈಕಾಲು ತೊಳೆಯಲು ನೀರು ಕೊಟ್ಟು, ಪನ್ನೀರು ಚಿಮ್ಮಿ, ಮಹಿಳೆಯರಿಗೆ ಅರಿಸಿನ ಕುಂಕುಮ ಹಚ್ಚಿ ಸ್ವಾಗತ ಕೋರಿದರು. ಸುಡು ಬಿಸಿಲಿನಿಂದ ಬಂದ ಜನರಿಗೆ ತಂಪು ಪಾನೀಯ ನೀಡಿ ನೀರಡಿಕೆಯ ದಾಹ ತಣಿಸಿದರು. ವೈದಿಕರು ಯಜ್ಞಕುಂಡದಲ್ಲಿ ಚಂಡಿ ಹವನ ನೆರವೇರಿಸಿದರು.

ಶ್ರೀಗಳ ಪಾದಪೂಜೆ, ಭಿಕ್ಷೆ ಸೇವೆ ನಡೆಯಿತು. ಸಂಜೆ ನಡೆದ ಅತ್ಯಂತ ನಿರೀಕ್ಷೆಯ ಅಂಬಾಕಥಾ ಕಾರ್ಯಕ್ರಮದಲ್ಲಿ ರಾಮಚಂದ್ರಾಪುರ ಮಠಾಧೀಶ ಶ್ರೀಮದ್ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರವಚನದಲ್ಲಿ ಮಾರ್ಕಾಂಡೇಯ ಪುರಾಣದ ದುರ್ಗಾ ಸಪ್ತಶತಿ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಿದರು. ಶ್ರೀಗಳ ಪ್ರವಚನದೊಂದಿಗೆ ಚಿತ್ರ ಕಲಾವಿದ ನೀರ್ನಳ್ಳಿ ಕ್ಷಣಾರ್ಧದಲ್ಲಿ ಚಿತ್ರ ಬಿಡಿಸಿದರು.

ಗಾಯಕಿ ಪ್ರೇಮಲತಾ ದಿವಾಕರ, ಶ್ರೀಪಾದ ಭಟ್ಟ ಕಡತೋಕಾ ಮತ್ತು ಕಲಾವಿದರು ಸಂಗೀತ ಸವಿ ನೀಡಿದರು. ಅಂತಿಮವಾಗಿ ಆನಂದನರ್ತನದ ಸಮ್ಮಿಲನದೊಂದಿಗೆ ಎರಡನೇ ದಿನದ ಅಂಬೆಯ ಉಪಾಸನೆ ಸಮಾಪ್ತಿಯಾಯಿತು. ಗುರುವಾರ (ಅ.18) ಸಂಜೆ 5 ಗಂಟೆಯಿಂದ ಮೂರನೇ ದಿನದ ಅಂಬಾಕಥಾ ಮುಂದುವರಿಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.