ಕಾರವಾರ: ಕೈಗಾ ಅಣುವಿದ್ಯುತ್ ಯೋಜನೆಯಿಂದ ಬಾಧಿತ ಐದು ಕಿಲೋ ಮೀಟರ್ ವ್ಯಾಪ್ತಿಯ ಹರ್ಟುಗಾ, ಬಾಳೆಮನಿ, ಹರೂರು, ಬಳಸೆ, ಕುಚೇಗಾರ ಮತ್ತು ಸುಳಗೇರಿ ಪ್ರದೇಶದ ಸುಮಾರು 500 ಕುಟುಂಬಗಳು ತಮ್ಮನ್ನು ಸ್ಥಳಾಂತರ ಮಾಡಬೇಕು ಪುನರ್ವಸತಿ ಕಲ್ಪಿಸಬೇಕು ಎಂದು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಕೈಗೊಂಡ, 104ನೇ ದಿನಕ್ಕೆ ಕಾಲಿಟ್ಟ ಹೋರಾಟವನ್ನು ಶನಿವಾರ ಸಂಜೆ ಅಂತ್ಯಗೊಳಿಸಿದರು.
ಬೇಡಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರಿಗೆ ಪತ್ರ ಬರೆಯುವ ಕುರಿತು ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟವನ್ನು ಅಂತ್ಯಗೊಳಿಸಲಾಗಿದೆ ಎಂದು ಹೋರಾಟದ ನೇತೃತ್ವ ವಹಿಸಿದ್ದ ಮುಖಂಡರು ತಿಳಿಸಿದರು.
ಬೇಡಿಕೆ ಈಡೇರಿಕೆಗೆ ಇಷ್ಟೊಂದು ಸುದೀರ್ಘ ಅವಧಿಯವರೆಗಿನ ಹೋರಾಟ ಜಿಲ್ಲೆಯಲ್ಲಿ ಹಿಂದೆಂದೂ ನಡೆದಿರಲಿಲ್ಲ. ಒಟ್ಟು ಆರು ಗ್ರಾಮಗಳ ಗ್ರಾಮಸ್ಥರ ಜನರು ಪಾಳಿಯ ಮೇಲೆ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು.
ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಹೋರಾಟ ಸಮಿತಿ ಸದಸ್ಯರು ಎರಡು ಬಾರಿ ದೆಹಲಿ ಮತ್ತು ನಾಲ್ಕೈದು ಬಾರಿ ಬೆಂಗಳೂರಿಗೆ ಹೋಗಿ ಸಂಬಂಧ ಪಟ್ಟವರನ್ನು ಭೇಟಿ ಮಾಡಿದ್ದರು. ಸಿಪಿಎಂ ಪಶ್ಚಿಮ ಬಂಗಾಳದ ಸಂಸದ ಬಸುದೇವ ಆಚಾರ್ಯ ಇಲ್ಲಿಗೆ ಭೇಟಿ ಹೋರಾಟಗಾರರಿಗೆ ಧೈರ್ಯ ತುಂಬಿದ್ದರು. ಸಂಸದ ಸೀತಾರಾಮ ಯೆಚೂರಿ ಅವರು ಗ್ರಾಮಸ್ಥರ ನಿಯೋಗ ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಅವರೊಂದಿಗಿದ್ದು ವಿಕೋಪ ನಿರ್ವಹಣಾ ಸಮಿತಿ ಅಧ್ಯಕ್ಷ ಶಶಿಧರ ರೆಡ್ಡಿ ಅವರನ್ನು ಭೇಟಿ ಮಾಡಿಸಿದ್ದರು.
ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾ ಘಟಕದ ಕಾರ್ಯದರ್ಶಿ ಶಾಂತಾರಾಮ ನಾಯಕ, ಸಿಐಟಿಯುನ ಕಾರ್ಯದರ್ಶಿ ಯಮುನಾ ಗಾಂವಕರ್, ಬಯ್ಯಾ ರೆಡ್ಡಿ ಸೇರಿದಂತೆ ಅನೇಕ ನಾಯಕರು ಹೋರಾಟಗಾರರಿಗೆ ಬೆನ್ನೆಲುಬಾಗಿ ನಿಂತಿದ್ದರು.
`ಗ್ರಾಮಸ್ಥರ ಹೋರಾಟ ಅಂತ್ಯವಾಗಿಲ್ಲ. ಸಿಎಮ್ ಅವರಿಗೆ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟ ಹಿಂದಕ್ಕೆ ಪಡೆದುಕೊಳ್ಳಲಾಗಿದೆ. ಕೇಂದ್ರಕ್ಕೆ ಹೋಗಿ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಲಿದ್ದೇವೆ. ಎಲ್ಲ ಕಡೆಯಿಂದ ಬಂದ ಟೀಕೆ, ಟಿಪ್ಪಣಿಗಳನ್ನು ಸಹಿಸಿಕೊಂಡು ಎಲ್ಲವನ್ನು ಸವಾಲಾಗಿ ಸ್ವೀಕರಿಸಿಕೊಂಡು ಹೋರಾಟವನ್ನು ಮುಂದುವರಿಸಿದ್ದೇವೆ. ಇನ್ನು ಮುಂದೆ ಹೋರಾಟದ ರೂಪುರೇಶೆಗಳು ಬದಲಾಗಲಿದೆ~ ಎಂದು ಮಾರುತಿ ಮಾನ್ಪಡೆ ತಿಳಿಸಿದರು.
ಖರ್ಚು-ವೆಚ್ಚ
104 ದಿನದ ಹೋರಾಟದಲ್ಲಿ ಎರಡು ಸಾವಿರ ಜನರು ಪಾಲ್ಗೊಂಡಿದ್ದು ಒಟ್ಟು 10ಹತ್ತು ಕ್ವಿಂಟಲ್ ಅಕ್ಕಿ, 50 ಕೆ.ಜಿ. ಬೆಳೆ, 20.ಕೆ.ಜಿ. ಸಕ್ಕರೆ, 10.ಕೆ.ಜಿ. ಚಹಾಪುಡಿ, ಒಂದು ಲೋಡ್ ಕಟ್ಟಿಗೆ, ಸಾರಿಗೆ ವೆಚ್ಚ ಸೇರಿದಂತೆ ಅಂದಾಜು ಎರಡು ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ ಎಂದು ಹೋರಾಟ ಸಮಿತಿ ಸದಸ್ಯರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.