ADVERTISEMENT

‘ಭತ್ತಕ್ಕೆ ಬೆಂಬಲ ಬೆಲೆ ಅನಿವಾರ್ಯ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 7:11 IST
Last Updated 12 ಡಿಸೆಂಬರ್ 2013, 7:11 IST

ಸಿದ್ದಾಪುರ: ‘ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ತಂದಿದೆ. ರಾಜ್ಯ ಸರ್ಕಾರ ಆರಂಭಿಸಿರುವ ಬಡವರಿಗೆ  1 ರೂಪಾಯಿಗೆ ಕೆಜಿ ಅಕ್ಕಿ ನೀಡುವ ಕಾರ್ಯಕ್ರಮವೂ ಒಳ್ಳೆಯದೆ ಆಗಿದೆ. ಆದರೆ ಆಹಾರ ಉತ್ಪಾದನಾ ಭದ್ರತೆಯ ಬಗ್ಗೆ ಯಾರೂ ಯೋಚಿಸುತ್ತಿಲ್ಲ’ ಎಂದು ಜೆಡಿಎಸ್‌ ಧುರೀಣ ಶಶಿಭೂಷಣ ಹೆಗಡೆ  ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭತ್ತದ ಬೆಳೆ ಪ್ರಮಾಣ ಎಲ್ಲ ಕಡೆ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ‘ಸಿದ್ದಾಪುರ ತಾಲ್ಲೂಕಿಗೆ 4250 ಕ್ವಿಂಟಲ್(ಮೊದಲು 1800 ಕ್ವಿಂಟಲ್) ಅಕ್ಕಿ ಸಾರ್ವಜನಿಕ ಪಡಿತರ ವಿತರಣೆಗೆ ಬೇಕಾಗಿದೆ.

ಪ್ರಸ್ತುತ  ಕೆ.ಜಿ. ಭತ್ತಕ್ಕೆ ₨14–15 ಧಾರಣೆಯಿದ್ದು, ಇಷ್ಟು ಕಡಿಮೆ ಧಾರಣೆ ಸಿಕ್ಕರೆ ಯಾರು ಭತ್ತ ಬೆಳೆಯಲು ಮುಂದಾಗುತ್ತಾರೆ. ಇದರಿಂದ ರೈತರು ಭತ್ತದ ಬೆಳೆ ಬೆಳೆಯುವುದನ್ನು ನಿಲ್ಲಿಸುವ ಸ್ಥಿತಿ ಬಂದೊದಗಿದೆ. ಪಡಿತರ ವ್ಯವಸ್ಥೆಯ ಅಕ್ಕಿಗೆ ಪರದಾಡುವ ಸ್ಥಿತಿ ಉಂಟಾಗುತ್ತಿದ್ದು, ಸರ್ಕಾರ ₨ 29–30ಕ್ಕೆ ಅಕ್ಕಿ ಖರೀದಿ ಮಾಡುತ್ತಿದೆ. ಆದರೆ ಇಲ್ಲಿನ ಭತ್ತ ಬೆಳೆಯುವ ರೈತರಿಗೆ ಉತ್ತಮ ಧಾರಣೆ ಸಿಗುತ್ತಿಲ್ಲ. ಆದ್ದರಿಂದ ಭತ್ತಕ್ಕೆ ಕೆಜಿಗೆ ₨ 20–25ರ ದರದಲ್ಲಿ ಬೆಂಬಲ ಬೆಲೆಯನ್ನು ಸರ್ಕಾರ ಘೋಷಣೆ ಮಾಡಬೇಕು’ ಎಂದರು.

‘ತಾಲ್ಲೂಕಿನ ಮನಮನೆ, ಕಾಂವಚೂರು, ಶಿರಳಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ  ಮತ್ತು ಶಿರಸಿ ತಾಲ್ಲೂಕಿನ ಬನವಾಸಿ ಪ್ರದೇಶದಲ್ಲಿ ವರ್ಷಕ್ಕೆ ಒಂದೇ ಬೆಳೆ ಭತ್ತ ಬೆಳೆದು, ಜೀವನ ನಡೆಸುವವರು ಇದ್ದಾರೆ. ಈಗಿನ ಭತ್ತದ ಧಾರಣೆಯಲ್ಲಿ ಅವರು ಬದುಕುವುದು ಸಾಧ್ಯವೇ’ ಎಂದು ಪ್ರಶ್ನಿಸಿದ ಅವರು, ‘ಭತ್ತಕ್ಕೆ ಬೆಂಬಲ ಬೆಲೆ ನೀಡುವುದು ಅನಿವಾರ್ಯ ವಾಗಿದೆ. ಇದೂ ಅಲ್ಲದೇ ಭತ್ತದ ಕೃಷಿಗೆ ಯಾಂತ್ರೀಕರಣದ ಲಾಭ ದೊರೆಯು ವಂತೆ  ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT