ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ: ಸಿದ್ದಾಪುರದ ಮೂವರಿಗೆ ಶೇ 100ರಷ್ಟು ಅಂಕ

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಗೆ ‘ಎ’ ಶ್ರೇಣಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 13:03 IST
Last Updated 9 ಆಗಸ್ಟ್ 2021, 13:03 IST
ರೇಷ್ಮಾ ಗಣೇಶ ಹೆಗಡೆ
ರೇಷ್ಮಾ ಗಣೇಶ ಹೆಗಡೆ   

ಶಿರಸಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆ ಈ ಬಾರಿ ‘ಎ’ ಶ್ರೇಣಿ ಫಲಿತಾಂಶ ಸಾಧಿಸಿದೆ. ಈ ಜಿಲ್ಲೆ ವ್ಯಾಪ್ತಿಯ ಸಿದ್ದಾಪುರ ತಾಲ್ಲೂಕಿನ ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಕಾನಸೂರಿನ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ರೇಷ್ಮಾ ಗಣೇಶ ಹೆಗಡೆ ಮತ್ತು ಎಸ್.ಎನ್.ಸುನಯ್ ಹಾಗೂ ಸಿದ್ದಾಪುರ ಪಟ್ಟಣದ ಪ್ರಶಾಂತಿ ಆಂಗ್ಲ ಮಾಧ್ಯಮ ಶಾಲೆಯ ಹೇಮಾ ಉಮೇಶ ಹೆಗಡೆ 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳು.

ಪರೀಕ್ಷೆಗೆ ನೊಂದಾಯಿತರಾಗಿದ್ದ 5,137 ಬಾಲಕರು, 4,893 ಬಾಲಕಿಯರು ಸೇರಿ ಎಲ್ಲ 10,300 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 927 ವಿದ್ಯಾರ್ಥಿಗಳು ‘ಎ+’ ಶ್ರೇಣಿ, 2,261 ಮಂದಿ ‘ಎ’ ಶ್ರೇಣಿ, 4,783 ಮಕ್ಕಳು ‘ಬಿ’ ಶ್ರೇಣಿ ಹಾಗೂ 2,059 ಮಂದಿ ‘ಸಿ’ ಶ್ರೇಣಿ ಪಡೆದಿದ್ದಾರೆ.

ADVERTISEMENT

154 ಶಾಲೆಗಳು ‘ಎ’ ಶ್ರೇಣಿ ಸಾಧನೆ ಮಾಡಿವೆ. 21 ಶಾಲೆಗಳು ‘ಬಿ’ ಶ್ರೇಣಿ ಪಡೆದುಕೊಂಡಿದ್ದು, ‘ಸಿ’ ಶ್ರೇಣಿ ಸಾಧನೆ ಯಾವ ಶಾಲೆಯೂ ಮಾಡಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಪ್ರತಿ ಬಾರಿ ಫಲಿತಾಂಶದಲ್ಲಿ ಹಿಂದೆ ಬೀಳುತ್ತಿದ್ದ ಜೋಯಿಡಾ ತಾಲ್ಲೂಕು ಈ ಬಾರಿ ಉತ್ತಮ ಸಾಧನೆ ಮಾಡಿದೆ. ಇಲ್ಲಿನ ಎಲ್ಲ 18 ಶಾಲೆಗಳು ‘ಎ’ ಗ್ರೇಡ್ ಫಲಿತಾಂಶ ದಾಖಲಿಸಿವೆ.

‘ಕಳೆದ ವರ್ಷದ ಫಲಿತಾಂಶದಲ್ಲಿ ಜಿಲ್ಲೆಗೆ 15ನೇ ಸ್ಥಾನ ಲಭಿಸಿತ್ತು. ಈ ಬಾರಿ ರ‍್ಯಾಂಕ್ ವ್ಯವಸ್ಥೆ ಇರದಿದ್ದರೂ ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿದ್ದೇವೆ. ಕೋವಿಡ್ ನಡುವೆಯೂ ಗೊಂದಲ, ಆತಂಕವಿಲ್ಲದೆ ಪರೀಕ್ಷೆ ನಡೆಸಿದ ಸಮಾಧಾನವಿದೆ’ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ದಿವಾಕರ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.