ADVERTISEMENT

ಮೆಣಸು ತಳಿ ಸಂರಕ್ಷಣೆಗೆ ಒತ್ತು ನೀಡಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 7:04 IST
Last Updated 8 ಜನವರಿ 2018, 7:04 IST

ಸಿದ್ದಾಪುರ: ‘ಜಿಲ್ಲೆಯ ಕೃಷಿಕರನ್ನು ಕಾಳು ಮೆಣಸು ಬೆಳೆ ಕಾಪಾಡುತ್ತದೆ. ಜಿಲ್ಲೆಯಲ್ಲಿ ಉತ್ಕೃಷ್ಟ ತಳಿಯ ಮೆಣಸು ಇದೆ. ಅಂತಹ ತಳಿಗಳನ್ನು ಉಳಿಸಿಕೊಳ್ಳಬೇಕು’ ಎಂದು ಕೃಷಿ ವಿಜ್ಞಾನಿ ಡಾ.ವೇಣುಗೋಪಾಲ ಅಭಿಪ್ರಾಯಪಟ್ಟರು.

ಸಂಸ್ಕೃತಿ ಸಂಪದ ಹಾಗೂ ಶೃಂಗೇರಿ ಶಂಕರ ಮಠದ ಸಹಯೋಗದಲ್ಲಿ ಭಾನುವಾರ ಶಂಕರ ಮಠದಲ್ಲಿ ನಡೆದ ದೊಡ್ಮನೆ ಗಣೇಶ ಹೆಗಡೆ ಸ್ಮೃತಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಮ್ಮನ್ನು ನೋಡಿಕೊಳ್ಳಲು ಮಕ್ಕಳು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಕಾಳು ಮೆಣಸು ನಮ್ಮನ್ನು ಸಾಕುತ್ತದೆ’ ಎಂದರು.

ಮುಖ್ಯ ಅತಿಥಿಯಾಗಿದ್ದ ಪರಿಸರ ತಜ್ಞ ಶಿವಾನಂದ ಕಳವೆ, ‘ಪ್ರಶಸ್ತಿ ಪುರಸ್ಕೃತರಾದ ಶ್ರೀಧರ ಗೋವಿಂದ ಭಟ್ಟ ಹೊಸ ತೋಟವನ್ನು ಖರೀದಿಸಿ, ಅದರಲ್ಲಿ ಪ್ರಯೋಗ ಶೀಲತೆಯಿಂದ ಕಾಳು ಮೆಣಸು ಬೆಳೆದರು. ಅವರ ಕೃಷಿಯನ್ನು ತಿಳಿಯಬೇಕಾದರೆ ಅವರ ತೋಟವನ್ನು ನೋಡಬೇಕು‌’ ಎಂದು ಹೇಳಿದರು.

ADVERTISEMENT

‘ಕಾಳು ಮೆಣಸಿನ ತಳಿಗಳು ಹಾಸನ ಮತ್ತು ಸಕಲೇಶಪುರದಲ್ಲಿ ಬೆಳೆದಿವೆ. ಜಿಲ್ಲೆಯಿಂದ ಹೊರಗೇ ಓಡುವ ಹುಡುಗರನ್ನು ಇಲ್ಲಿಯೇ ಹಿಡಿದಿಡಲು ಶ್ರೀಧರ ಭಟ್ಟರಂತವರು ನಮಗೆ ಬೇಕು. ರಾಜ್ಯದಲ್ಲಿ ಹಾಗೂ ರಾಜ್ಯದ ಹೊರಗೆ ಅಡಿಕೆ ಬೆಳೆಯ ಪ್ರದೇಶ ವಿಸ್ತರಣೆಯಾಗುತ್ತಿದೆ. ಆದ್ದರಿಂದ ಅಡಿಕೆ ಮಾರುಕಟ್ಟೆ ಸಂಕಷ್ಟದಲ್ಲಿದೆ. ಅದರೊಂದಿಗೆ ರೋಗ ನಿರ್ವಹಣೆ ಇಲ್ಲದೆ, ಕಾಳು ಮೆಣಸು ಬೆಳೆಯನ್ನು ಕಳೆದುಕೊಂಡಿದ್ದೇವೆ’ ಎಂದು ಅಭಿಪ್ರಾಯಪಟ್ಟರು. ಕಾಳು ಮೆಣಸು ಕೃಷಿಕ ಯಲ್ಲಾಪುರ ಚವತ್ತಿಯ ಶ್ರೀಧರ ಗೋವಿಂದ ಭಟ್ಟ ಹೊಸ್ಮನೆ ಅವರಿಗೆ ದೊಡ್ಮನೆ ಗಣೇಶ ಹೆಗಡೆ ಸ್ಮೃತಿ ಪುರಸ್ಕಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಣೇಶ ಹೆಗಡೆ, ‘ಈ ಭಾಗದಲ್ಲಿ ಒಂದು ಎಕರೆ ತೋಟವನ್ನು ಶ್ರದ್ಧೆಯಿಂದ ಪ್ರೀತಿಯಿಂದ ಆರೈಕೆ ಮಾಡಿದರೆ, ನೆಮ್ಮದಿಯಿಂದ ಬದುಕಬಹುದು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಮಾನಸಿಕ ದೃಢತೆ ಹಾಗೂ ಶ್ರದ್ಧೆ ಅಗತ್ಯ. ಈ ಪುರಸ್ಕಾರದಿಂದ ಸಮಾಜಮುಖಿಯಾಗಿ ಕೆಲಸ ಮಾಡಲು ಇನ್ನಷ್ಟು ಪ್ರೇರಣೆ ಸಿಕ್ಕಿದೆ’ ಎಂದರು.

ಟಿಎಸ್ಎಸ್ ನಿರ್ದೇಶಕ ಆರ್.ಆರ್. ಹೆಗಡೆ ಐನಕೈ ಮತ್ತು ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತೀಹಳ್ಳಿ ಮಾತನಾಡಿದರು. ಶೇಷಗಿರಿ ಭಟ್ಟ ಗುಂಜಗೋಡು ಸ್ವಾಗತಿಸಿದರು. ಎಂ.ಕೆ.ನಾಯ್ಕ ಹೊಸಳ್ಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.