ADVERTISEMENT

ಶಿರಸಿಯಲ್ಲಿ 85 ಮಿ.ಮೀ ಮಳೆ

ತುಂಬಿ ಹರಿಯುತ್ತಿರುವ ಹಳ್ಳ–ಕೊಳ್ಳಗಳು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 14:04 IST
Last Updated 4 ಆಗಸ್ಟ್ 2019, 14:04 IST
ಕೆಂಗ್ರೆಹೊಳೆಗೆ ತುಂಬಿ ಹರಿಯುವ ಸಂಭ್ರಮ
ಕೆಂಗ್ರೆಹೊಳೆಗೆ ತುಂಬಿ ಹರಿಯುವ ಸಂಭ್ರಮ   

ಶಿರಸಿ: ಜಿಲ್ಲೆಯ ಘಟ್ಟದ ಮೇಲಿನ ಭಾಗದಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ನದಿ, ಹಳ್ಳ–ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಗಾಳಿಗೆ ಮರಗಳು ಧರೆಗುರುಳಿರುವ ಪರಿಣಾಮ ಅಲ್ಲಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ನಗರದಲ್ಲಿ ಚರಂಡಿಗಳು ಉಕ್ಕಿ ರಸ್ತೆಯ ಮೇಲೆ ಹರಿಯುತ್ತಿದ್ದು, ನದಿಗಳಂತೆ ಗೋಚರಿಸುತ್ತಿವೆ. ಅಘನಾಶಿನಿ, ಬೇಡ್ತಿ, ವರದಾ, ಶಾಲ್ಮಲಾ ನದಿಗಳು ತುಂಬಿ ಹರಿಯುತ್ತಿವೆ. ತಾಲ್ಲೂಕಿನ ತಾರಗೋಡ ಸಮೀಪ ಬೃಹತ್ ಮರ ರಸ್ತೆಯ ಮೇಲೆ ಬಿದ್ದು ಒಂದು ತಾಸು ಕಾಲ ಶಿರಸಿ–ಯಲ್ಲಾಪುರ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.ಹುತ್ಗಾರ ಸಮೀಪ ವಿದ್ಯುತ್ ತಂತಿಯ ಮೇಲೆ ಅಕೇಶಿಯಾ ಮರ ಬಿದ್ದು ಮೂರು ವಿದ್ಯುತ್ ಕಂಬಗಳು ಮುರಿದಿವೆ. ವಿದ್ಯುತ್ ಇಲ್ಲದೇ ಅನೇಕ ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ.

ನರೇಬೈಲ್ ಸಮೀಪದ ಹನುಮಂತಪ್ಪ ಬೋವಿವಡ್ಡರ್ ಮನೆಯ ಮೇಲೆ ಬೃಹತ್ ಮಾವಿನ ಮರ ಮುರಿದು ಬಿದ್ದು, ₹ 15ಸಾವಿರಕ್ಕೂ ಅಧಿಕ ಹಾನಿ ಸಂಭವಿಸಿದೆ. ಶನಿವಾರ ರಾತ್ರಿ ಬೀಸಿದ ಅಬ್ಬರದ ಗಾಳಿಗೆ ಮರ ಬಿದ್ದಿದ್ದು, ಆ ವೇಳೆ ಮನೆಯ ಮೂವರು ಸದಸ್ಯರು ಒಳಗೆ ಮಲಗಿದ್ದರು. ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಿರ್ಮಲಾ ಶೆಟ್ಟಿ, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಭಾನುವಾರ ಬೆಳಿಗ್ಗೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ತಾಲ್ಲೂಕಿನಲ್ಲಿ 85 ಮಿ.ಮೀ ಮಳೆಯಾಗಿದೆ. ಈವರೆಗೆ ತಾಲ್ಲೂಕಿನಲ್ಲಿ 1601 ಮಿ.ಮೀ ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.