ADVERTISEMENT

‘ಸಾಲಮನ್ನಾ ಪ್ರಯೋಜನ ಲಭಿಸುವಂತೆ ಶ್ರಮ’

ಹರಿಕಂತ್ರ ಮಹಾಜನ ಸಂಘದ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 14:23 IST
Last Updated 10 ಏಪ್ರಿಲ್ 2021, 14:23 IST
ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘ ಮುರ್ಡೇಶ್ವರದಲ್ಲಿ ಈಚೆಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿವಿಧ ರಂಗಗಳ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕಿ ರೂಪಾಲಿ ನಾಯ್ಕ ಇದ್ದಾರೆ
ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘ ಮುರ್ಡೇಶ್ವರದಲ್ಲಿ ಈಚೆಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿವಿಧ ರಂಗಗಳ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕಿ ರೂಪಾಲಿ ನಾಯ್ಕ ಇದ್ದಾರೆ   

ಕಾರವಾರ: ‘ಮೀನುಗಾರರ ಏಳಿಗೆಗಾಗಿ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಮುಖ್ಯಮಂತ್ರಿ ಬಳಿ ಮಾತುಕತೆ ನಡೆಸಿ ಸಾಲಮನ್ನಾ ಯೋಜನೆಯ ಹೆಚ್ಚಿನ ಪ್ರಯೋಜನ ನಮ್ಮ ಜಿಲ್ಲೆಯ ಮೀನುಗಾರರಿಗೂ ಸಿಗುವಂತೆ ಮಾಡಲಾಗುತ್ತಿದೆ’ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಮುರ್ಡೇಶ್ವರದ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಳ್ಳಲಾದ ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ 15ನೇ ವರ್ಷದ ಪ್ರತಿಭಾ ಪುರಸ್ಕಾರ, ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ, ಸಮಾಜದ ಸಾಧಕರಿಗೆ, ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮೀನುಗಾರರು ಶ್ರಮಿಕರು. ಸರ್ಕಾರದಿಂದ ಅವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮತ್ತಷ್ಟು ಪ್ರಯತ್ನ ಆಗಬೇಕಿದೆ. ಹರಿಕಂತ್ರ ಸಮಾಜದ ಸಮುದಾಯ ಭವನಕ್ಕೆ ₹ 1 ಕೋಟಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ADVERTISEMENT

ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ, ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಗೌರವಾಧ್ಯಕ್ಷ ಗಣಪತಿ ಆರ್. ಮಾಂಗ್ರೆ ಮಾತನಾಡಿದರು. ಹರಿಕಂತ್ರ ಮಹಾಜನ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗಣಪತಿ ಡಿ. ಉಳ್ವೇಕರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಹರಿಕಂತ್ರ ಸಮಾಜದ ಪ್ರಮುಖರಾದ ಗೋವಿಂದ ಮಾಸ್ತಿ ಹರಿಕಾಂತ, ಶಂಭು ನಾರಾಯಣ ಖಾರ್ವಿ, ಜಗದೀಶ ನುಶಿಕೋಟೆ, ಸುರೇಶ ಹರಿಕಾಂತ, ರೋಶನ್ ಹರಿಕಂತ್ರ, ರಾಘು ಎಂ. ಹರಿಕಂತ್ರ ಇದ್ದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಬಿ. ಹರಿಕಾಂತ ಸ್ವಾಗತಿಸಿದರು. ಶೈಕ್ಷಣಿಕ ಸಮಿತಿ ಅಧ್ಯಕ್ಷ ಶಿವಾನಂದ ತಾಂಡೇಲ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಶ್ರೀಕಾಂತ ಕೇಣಿ ವಂದಿಸಿದರು.

ಎಸ್ಸೆಸ್ಸೆಲ್ಸಿ, ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಮತ್ತು 35ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರನ್ನು, ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.