ADVERTISEMENT

ಜನರ ಸಮಸ್ಯೆಗೆ ಸೂಕ್ತ ಪರಿಹಾರ: ಸಚಿವ ಮಂಕಾಳ ಎಸ್‌.ವೈದ್ಯ

​ಪ್ರಜಾವಾಣಿ ವಾರ್ತೆ
Published 17 ಮೇ 2025, 12:19 IST
Last Updated 17 ಮೇ 2025, 12:19 IST
ಭಟ್ಕಳದ ನ್ಯೂ ಇಂಗ್ಲಿಷ್‌ ಸ್ಕೂಲ್‌ ಕಮಲಾವತಿ ಸಬಾಭವನದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು
ಭಟ್ಕಳದ ನ್ಯೂ ಇಂಗ್ಲಿಷ್‌ ಸ್ಕೂಲ್‌ ಕಮಲಾವತಿ ಸಬಾಭವನದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು   

ಭಟ್ಕಳ: ‘ಜನಸ್ಪಂದನಾ ಕಾರ್ಯಕ್ರಮ ಕಾಟಚಾರಕ್ಕಲ್ಲ. ಇಲ್ಲಿ ಅಹವಾಲು ಸಲ್ಲಿಸುವ ಎಲ್ಲರಿಗೂ ಸ್ಪಂದಿಸಿ, ಸೂಕ್ತ ಪರಿಹಾರ ಸೂಚಿಸಲಾಗುವುದು’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್‌. ವೈದ್ಯ ಹೇಳಿದರು.

ಪಟ್ಟಣದ ನ್ಯೂ ಇಂಗ್ಲಿಷ ಸ್ಕೂಲ್‌ ಕಮಲಾವತಿ ಸಭಾಭವನದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜನಸ್ಪಂದನಾ ಕಾರ್ಯಕ್ರಮವನ್ನು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಹಮ್ಮಿಕೊಳ್ಳಲಾಗುತ್ತದೆ. ಜನಸಾಮಾನ್ಯರ ತೆರಿಗೆ ಹಣದಿಂದ ವೇತನ ಪಡೆಯುವ ಅಧಿಕಾರಿಗಳು ಮತ್ತು ನಾವು, ಅವರ ಕಷ್ಟಕ್ಕೆ ಸ್ಪಂದಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರ ಸೌಲಭ್ಯ ದೊರಕಿಸಲು  ಶ್ರಮಿಸಬೇಕು’ ಎಂದರು.

ADVERTISEMENT

ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸ್ಪಂದನಾ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತೆ ತಿಳಿಸಿದರು.

‘ಮನೆಯಲ್ಲಿ ಆಸ್ತಮಾ ಪೀಡಿತ ಪತ್ನಿ ಇದ್ದಾರೆ. ವಾಸಿಸಲು ಯೋಗ್ಯವಾದ ಮನೆಯೂ ಇಲ್ಲ. ಅರಣ್ಯ ಇಲಾಖೆಯವರು ಮನೆ ನಿರ್ಮಿಸಲು ಅವಕಾಶ ನೀಡುತ್ತಿಲ್ಲ. ಒಂದು ಗುಂಟೆ ಜಾಗವನ್ನಾದರೂ ಮಂಜೂರು ಮಾಡಿಸಿ’ ಎಂದು ಶಿರಸಿಯ ಇಟಗುಳಿ ಗ್ರಾಮ ಪಂಚಾಯಿತಿ ನಿವಾಸಿ ನವಾಬ್‌ ಸಾಬ್‌ ಕೋರಿದರು.

‘ಕಾರ್ಮಿಕ ಇಲಾಖೆಯ ಅಧಿಕಾರಿಗಳು ಅರ್ಹ ಕಾರ್ಮಿಕರ ಕಾರ್ಡ್‌ಗಳನ್ನೂ ರದ್ದು ಪಡಿಸುತ್ತಿದ್ದಾರೆ’ ಜೆ.ಎನ್‌. ರೇವಣಕರ್‌ ಅವರು ದಾಖಲೆ ಸಮೇತ ದೂರಿತ್ತರು.

‘ಅಧಿಕಾರಿಗಳು ಗ್ರಾಮೀಣ ಭಾಗದ ಸಮಸ್ಯೆಗೆ ಸ್ಪಂದಿಸುವ ಆಸಕ್ತಿ ತೋರುತ್ತಿಲ್ಲ’ ಎಂದು ಮಾರುಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಡಿ. ನಾಯ್ಕ ಹೇಳಿದರು.

ಜಿಲ್ಲೆಯ 35 ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ, ಅಂಗವಿಕಲರಿಗೆ‌ ಉಚಿತವಾಗಿ ತ್ರಿಚಕ್ರವಾಹನ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದು, ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ.ವಿ., ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನಾಯ್ಕ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್‌ ಮುಲ್ಲ, ಪುರಸಭೆಯ ಅಧ್ಯಕ್ಷ ಅಲ್ತಾಫ ಖರೂರಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಗದೀಶ ಎಂ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.