ADVERTISEMENT

ಕಾರವಾರ: ಪಾಕಿಸ್ತಾನಿ ಪ್ರಜೆಗಳ ಗಡಿಪಾರು ಮಾಡಿ; ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ: ರಾಜ್ಯ ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಮೇ 2025, 12:20 IST
Last Updated 6 ಮೇ 2025, 12:20 IST
ರಾಜ್ಯದಲ್ಲಿ ಅಕ್ರಮವಾಗಿ ವಾಸವಿರುವ ಪಾಕಿಸ್ತಾನಿ ನಾಗರಿಕರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು
ರಾಜ್ಯದಲ್ಲಿ ಅಕ್ರಮವಾಗಿ ವಾಸವಿರುವ ಪಾಕಿಸ್ತಾನಿ ನಾಗರಿಕರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು    

ಕಾರವಾರ: ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ವಾಸವಿರುವ ಪಾಕಿಸ್ತಾನಿ ನಾಗರಿಕರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

‘ಅಕ್ರಮವಾಗಿ ವಾಸವಿರುವ ಪಾಕಿಸ್ತಾನಿ ಪ್ರಜೆಗಳನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಸಲ್ಲಿಸಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ‘ವೀಸಾ ರದ್ದಾಗಿಯೂ ಇಲ್ಲಿ ವಾಸವಿರುವವರನ್ನು ಮುಲಾಜಿಲ್ಲದೆ ಗಡಿಪಾರು ಮಾಡಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಆದರೆ, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಅಕ್ರಮ ವಲಸಿಗರನ್ನು ಕಾಪಿಡುವ ಪ್ರಯತ್ನ ನಡೆದಿದೆ’ ಎಂದು ಆರೋಪಿಸಿದರು.

ADVERTISEMENT

ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ‘ಧರ್ಮದ ಆಧಾರದಲ್ಲೇ ದೇಶ ವಿಭಜನೆ ಮಾಡಲಾಗಿತ್ತು. ಈಗ ಪಾಕಿಸ್ತಾನವು ಹಿಂದೂಗಳ ಹತ್ಯೆಗೆ ಕುಮ್ಮಕ್ಕು ನೀಡಿ ಭಾರತವನ್ನು ಕೆಣಕಲು ಮುಂದಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಶಾಸ್ತಿ ಮಾಡಲಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ದೇಶದ ಜನರು ಬೆಂಬಲ ನೀಡಬೇಕು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ‘ಧರ್ಮ ಗುರುತಿಸಿ ಹತ್ಯೆ ಮಾಡಿದ ಉಗ್ರರ ಪೈಶಾಚಿಕ ಮನಸ್ಥಿತಿ ಒಪ್ಪುವಂತದ್ದಲ್ಲ. ಈ ದುರ್ಘಟನೆಗೆ ಬೆಂಬಲವಾಗಿರುವ ಪಾಕಿಸ್ತಾನದ ಪ್ರಜೆಗಳು ದೇಶದಲ್ಲಿ ಇನ್ನೂ ಅಕ್ರಮವಾಗಿ ವಾಸವಿದ್ದು, ಅವರನ್ನು ಹೊರಹಾಕಬೇಕು’ ಎಂದು ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಪಕ್ಷದ ಪದಾಧಿಕಾರಿಗಳಾದ ಸುನೀಲ ಸೋನಿ, ಪ್ರಶಾಂತ ನಾಯ್ಕ, ನಾಗರಾಜ ನಾಯಕ, ಸುಜಾತಾ ಬಾಂದೇಕರ್, ಗಜಾನನ ಗುನಗಾ ಇದ್ದರು.

ಸಹಿ ಸಂಗ್ರಹ ಅಭಿಯಾನ

‘ಪಾಕಿಸ್ತಾನಿ ಪ್ರಜೆಗಳನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಜಿಲ್ಲೆಯಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು. ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಿ ಅದರೊಟ್ಟಿಗೆ ಮನವಿ ಪತ್ರ ಸೇರಿಸಿ ರಾಜ್ಯಪಾಲರಿಗೆ ರವಾನೆ ಮಾಡಲಾಗುವುದು’ ಎಂದು ಬಿಜೆಪಿ ಶಿಕ್ಷಕರ ಪ್ರಕೋಷ್ಠದ ಅಧ್ಯಕ್ಷ ಎಂ.ಜಿ. ಭಟ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.