ADVERTISEMENT

ಭಟ್ಕಳ: 'ಶುಚಿರುಚಿ' ಸಂಚಾರಿ ಮಹಿಳಾ ಕ್ಯಾಂಟೀನ್‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 13:11 IST
Last Updated 31 ಆಗಸ್ಟ್ 2024, 13:11 IST
ಭಟ್ಕಳದಲ್ಲಿ ಸಂಜೀವಿನಿ ಶುಚಿ ರುಜಿ ಸಂಚಾರಿ ಕ್ಯಾಂಟಿನ್‌ಗೆ ಸಚಿವ ಮಂಕಾಳ ವೈದ್ಯ ಚಾಲನೆ ನೀಡಿದರು
ಭಟ್ಕಳದಲ್ಲಿ ಸಂಜೀವಿನಿ ಶುಚಿ ರುಜಿ ಸಂಚಾರಿ ಕ್ಯಾಂಟಿನ್‌ಗೆ ಸಚಿವ ಮಂಕಾಳ ವೈದ್ಯ ಚಾಲನೆ ನೀಡಿದರು   

ಭಟ್ಕಳ: ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಜೀವನ ನಿರ್ವಹಣೆಗೆ ಉತ್ತೇಜನ ನೀಡಲು ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಅವರ ಪರಿಕಲ್ಪನೆಯೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ಶುಚಿ ರುಚಿ ಎನ್ನುವ ವಿನೂತನ ಮಾದರಿಯ ವಾಹನಗಳನ್ನು ಪರಿಚಯಿಸಲಾಗಿದೆ ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.

ಅವರು ಶನಿವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಶುಚಿ ರುಚಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಶ್ರೀ ಮುರ್ಡೇಶ್ವರ ಸಂಜೀವಿನಿ ಮಾವಳ್ಳಿ 2 ಗ್ರಾಮ ಪಂಚಾಯಿತಿ ಒಕ್ಕೂಟಕ್ಕೆ ಈ ವಾಹನದ ನಿರ್ವಹಣೆಯನ್ನು ನೀಡಲಾಗಿದೆ. ಈ ವಾಹನದಲ್ಲಿ ಮಹಿಳೆಯರು ಉಪಹಾರ, ಊಟ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ ಗ್ರಾಹಕರಿಗೆ ನೀಡಬಹುದು. ಇದು ಮೊಬೈಲ್ ವಾಹನವಾಗಿದ್ದು ಇದನ್ನು ಎಲ್ಲಿ ಬೇಕಾದರೂ ಕೊಂಡಯ್ಯಬಹುದು. ಅಲ್ಲದೆ ಇದನ್ನು ಮಹಿಳೆಯರಿಗಾಗಿಯೇ ವಿಶೇಷವಾಗಿ ಡಿಸೈನ್ ಮಾಡಲಾಗಿದ್ದು ಇದರಲ್ಲಿ ನೀರು ಸೇರಿದಂತೆ ಎಲ್ಲ ವ್ಯವಸ್ಥೆ ಒಂದೇ ವಾಹನದಲ್ಲಿ ಲಭ್ಯವಾಗಲಿದೆ’ ಎಂದರು.

ADVERTISEMENT

ಅತಿ ಕಡಿಮೆ ನಿರ್ವಹಣೆ ವೆಚ್ಚದಲ್ಲಿ ಮಹಿಳೆಯರ ಒಕ್ಕೂಟಕ್ಕೆ ಈ ವಾಹನ ನೀಡಲಾಗುವುದು ಎಂದು ಸಚಿವ ಮಂಕಾಳ ವೈದ್ಯ ಹೇಳಿದರು. ಇದು ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಅವರ ಪರಿಕಲ್ಪನೆಯಾಗಿದ್ದು ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಿ ಎಂದರು.

ಮಾವಳ್ಳಿ ಮಹಿಳಾ ಒಕ್ಕೂಟದ ಅಧ್ಯಕೆ ಸುಮಿತ್ರಾ ನಾಯ್ಕ, ಕಾರ್ಯದರ್ಶಿ ಮಮತಾ ನಾಯ್ಕ, ಸದಸ್ಯರಾದ ಜ್ಯೋತಿ ಅರುಣ ಡಿಕೊಸ್ತಾ, ಲಲಿತಾ ದೇವಾಡಿಗ, ಬೆಬಿ ಲಕ್ಷಣ ನಾಯ್ಕ, ನಾಗರತ್ನ ನಾಯ್ಕ, ಕವಿತಾ ನಾಯ್ಕ ಸೇರಿ ಒಟ್ಟು 15 ಸದಸ್ಯರು ಇದ್ದರು.

ಸಂಜೀವಿನಿ ವಲಯ ಮೇಲ್ವಿಚಾರಕ ಗೋಪಾಲ ನಾಯ್ಕ, ವೆಂಕಟೇಶ ದೇವಡಿಗ, ಕಾರ್ಯಕ್ರಮ ವ್ಯವಸ್ಥಾಪಕಿ ಶಾಂತಿಕಾ ನಾಯ್ಕ, ತಂಜೀಮ್‌ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.