ADVERTISEMENT

ವ್ಯಾಪಾರಿ ಅಂಗಳದಲ್ಲಿ ಚಕ್ಕುಲಿ ಕಂಬಳ

ಟಿಎಸ್‌ಎಸ್‌ನಿಂದ ವಿನೂತನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 14:15 IST
Last Updated 10 ಆಗಸ್ಟ್ 2019, 14:15 IST
ಶಿರಸಿಯ ಟಿಎಸ್‌ಎಸ್‌ನಲ್ಲಿ ಶನಿವಾರ ಚಕ್ಕುಲಿ ಕಂಬಳ ನಡೆಯಿತು
ಶಿರಸಿಯ ಟಿಎಸ್‌ಎಸ್‌ನಲ್ಲಿ ಶನಿವಾರ ಚಕ್ಕುಲಿ ಕಂಬಳ ನಡೆಯಿತು   

ಶಿರಸಿ: ಇಲ್ಲಿನ ಟಿಎಸ್‌ಎಸ್‌ ವ್ಯಾಪಾರಿ ಅಂಗಳದಲ್ಲಿ ಶನಿವಾರ ಅಡಿಕೆಯ ಬದಲಾಗಿ ಚಕ್ಕುಲಿಯ ಘಮ ಹರಡಿತ್ತು. ಕೈ ಚಕ್ಕುಲಿಯನ್ನು ಸುತ್ತುವ ಕಲೆಯನ್ನು ನೋಡಲು ನೂರಾರು ಜನರು ಸೇರಿದ್ದರು.

ಗ್ರಾಮೀಣ ಪ್ರದೇಶದಿಂದ ಬಂದಿದ್ದ 130ಕ್ಕೂ ಹೆಚ್ಚು ಪುರುಷರು, ಮಹಿಳೆಯರು ಸಾಲಾಗಿ ಕುಳಿತು ಮಣೆಯ ಮೇಲೆ ಚಕ್ಕುಲಿ ಸುತ್ತುವುದನ್ನು ನೋಡುವುದೇ ಎಲ್ಲರಿಗೂ ಸಂಭ್ರಮವಾಗಿತ್ತು. ಕೈ ಚಕ್ಕುಲಿ ಖರೀದಿಸಲು ಜನರು ಮುಗಿಬಿದ್ದರು. ಚಕ್ಕುಲಿಯ ದರ ಹೆಚ್ಚಳವಾಯಿತೆಂದು ಕೆಲವರು ಗೊಣಗಿಕೊಂಡರು.

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಚಕ್ಕುಲಿ ಕಂಬಳವನ್ನು ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ, ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಇದ್ದರು. ಟಿಎಸ್‌ಎಸ್‌ ಸಿಬ್ಬಂದಿ ಸಹ ಚಕ್ಕುಲಿ ಕಂಬಳದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಚಕ್ಕುಲಿಯ ಜೊತೆಗೆ ಸಾಂಪ್ರದಾಯಿಕವಾದ ಬೆಣ್ಣೆ, ಕಾಯಿತುರಿ, ಬೆಲ್ಲ, ಹಾಗೂ ಪಲ್ಯವನ್ನು ನೀಡಲಾಯಿತು.

ADVERTISEMENT

‘ಕೈಯಲ್ಲಿ ಚಕ್ಕುಲಿ ಸುತ್ತುವ ಸಂಪ್ರದಾಯವನ್ನು ಯುವಜನರಿಗೆ ಪರಿಚಯಿಸುವ ಮತ್ತು ಅದರ ಸವಿಯನ್ನು ಸವಿಯಲು ಅವಕಾಶ ಒದಗಿಸುವುದು ಕಂಬಳದ ಉದ್ದೇಶವಾಗಿತ್ತು. ಕಂಬಳಕ್ಕೆ ಜನರ ಸ್ಪಂದನ ನೋಡಿ ನಿಜಕ್ಕೂ ಅಚ್ಚರಿಯಾಯಿತು’ ಎಂದು ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ವೇದಾ ಹೆಗಡೆ, ಅಂಜನಾ ಭಟ್ ಹೇಳಿದರು.

ಪುಟ್ಟ ಬಾಲಕ:

ಎಂಟನೇ ತರಗತಿ ಓದುವ ಪುಟ್ಟ ಬಾಲಕ ಭೂಷಣ ಹೆಗಡೆ ಸಹ ಸರಸರನೆ ಕೈಯಲ್ಲಿ ಚಕ್ಕುಲಿ ಸುತ್ತುತ್ತಿದ್ದ. ‘ನಾನು ಐದನೇ ತರಗತಿಯಲ್ಲಿರುವಾಗಲೇ ಇದನ್ನು ಕಲಿತಿದ್ದೇನೆ. ಚಕ್ಕುಲಿ ಸುತ್ತುವುದು ತುಂಬ ಇಷ್ಟ’ ಎಂದ ಭೂಷಣ. ಅವನ ಅಪ್ಪ, ಅಜ್ಜ ಕೂಡ ಕಂಬಳದಲ್ಲಿ ಚಕ್ಕುಲಿ ಸುತ್ತುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.