ADVERTISEMENT

ಸಂತ್ರಸ್ತರಿಗೆ ಕೊಡಗು ಮಾದರಿ ಪರಿಹಾರ ಕಲ್ಪಿಸಿ: ಆನಂದ ಅಸ್ನೋಟಿಕರ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 11:45 IST
Last Updated 23 ಅಕ್ಟೋಬರ್ 2019, 11:45 IST
ಆನಂದ ಅಸ್ನೋಟಿಕರ್
ಆನಂದ ಅಸ್ನೋಟಿಕರ್   

ಕಾರವಾರ: ‘ಜಿಲ್ಲೆಯಲ್ಲಿ ನೆರೆ ಸಂತ್ರಸ್ತರಿಗೆ ಕೊಡಗಿನ ಮಾದರಿಯಲ್ಲಿ ಶಾಶ್ವತ ಪರಿಹಾರ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಕಾಳಿ, ಗಂಗಾವಳಿ ಮತ್ತು ಅಘನಾಶಿನಿ ನದಿ‍‍ಪಾತ್ರದ ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂರಲಾಗುವುದು’ ಎಂದು ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಲು ₹ 5 ಲಕ್ಷ ಪರಿಹಾರ ಕೊಟ್ಟರೆ ಸಾಲದು. ಜಿಲ್ಲೆಯಲ್ಲಿ ಮರಳು ಮತ್ತು ಕಲ್ಲಿನ ಸಮಸ್ಯೆ ಬಹಳವಾಗಿದೆ. ಹಾಗಾಗಿ ಸಂತ್ರಸ್ತರಿಗೆ ಮೊದಲು ನಿವೇಶನ ಗುರುತಿಸಿ, ನಂತರ ಮನೆ ನಿರ್ಮಿಸಿಕೊಡಿ ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದೇನೆ’ ಎಂದುತಿಳಿಸಿದರು.

‘ಕಾನೂನು ಮೀರಿ ನಡೆಯುತ್ತಿರುವ ಕೈಗಾ ಅಣು ವಿದ್ಯುತ್ ಸ್ಥಾವರ ಮತ್ತು ಕಾರವಾರ ಬಂದರು ವಿಸ್ತರಣೆ ವಿರುದ್ಧ ಸ್ಥಳೀಯರ ಹೋರಾಟಕ್ಕೆ ನಮ್ಮ ಸಹಮತವಿದೆ. ಮೀನುಗಾರರಿಗೆ ಸಮಸ್ಯೆ ಮಾಡಿ ಬಂದರು ವಿಸ್ತರಣೆ ಆಗಬಾರದು. ಮೊದಲು ಅವರ ಸಮಸ್ಯೆಗಳನ್ನು ಪರಿಹರಿಸಿ’ ಎಂದು ಒತ್ತಾಯಿಸಿದರು.

ADVERTISEMENT

‘ಸಚಿವ ಸಿ.ಟಿ.ರವಿ ಈಚೆಗೆ ನಗರಕ್ಕೆ ಬಂದಿದ್ದಾಗ ಇಲ್ಲಿನ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅಗತ್ಯ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಅದರಿಂದಮೀನುಗಾರರಿಗೆ ಯಾವುದೇ ತೊಂದರೆಯಾಗದು ಎಂದುವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಹೇಳಿದರು.

‘ಅಂಕೋಲಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ವಿರುದ್ಧ ಸ್ಥಳೀಯರ ಹೋರಾಟಕ್ಕೆನಮ್ಮ ಬೆಂಬಲವಿದೆ. ಆದರೆ, ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಅಗತ್ಯವಿದೆ. ಅಂಕೋಲಾ ತಾಲ್ಲೂಕಿನ ಯಾವುದಾದರೂ ಗ್ರಾಮ ಅಥವಾ ಕಿನ್ನರದಂತಹ ಪ್ರದೇಶಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಿ. ಇದರಿಂದ ಗೋವಾದ ಮೇಲೆ ಅವಲಂಬನೆ ತಪ್ಪುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನಾನು ಮೋದಿ ಅಭಿಮಾನಿ’: ‘ನಾನು ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿ. ಹಾಗಾಗಿ ಚುನಾವಣೆಯ ಸಂದರ್ಭದಲ್ಲಿ ಅವರ ವಿರುದ್ಧ ಮಾತನಾಡಲಿಲ್ಲ. ಅವರು ಸಬ್‌ ಕಾ ಸಾಥ್ ಸಬ್ ಕಾ ವಿಕಾಸ್ (ಎಲ್ಲರ ಜೊತೆಗೆ ಎಲ್ಲರ ಅಭಿವೃದ್ಧಿ) ಎಂದು ಹೇಳುತ್ತಾರೆ. ಆದರೆ, ಇಲ್ಲಿನ ಸಂಸದ ಅನಂತಕುಮಾರ ಹೆಗಡೆ ನಾಟಕವಾಡುತ್ತಾರೆ’ ಎಂದು ಆನಂದ ಅಸ್ನೋಟಿಕರ್ ಟೀಕಿಸಿದರು.

‘ನಿಮ್ಮ ಪಕ್ಷದ ಹೈಕಮಾಂಡ್ ಅನ್ನು ಮೆಚ್ಚಿಸಲು ಗಾಂಧಿ ಸಂಕಲ್ಪ ಯಾತ್ರೆ ಮಾಡಬೇಡಿ. ಗಾಂಧೀಜಿಗೆ ಪೂಜೆ ಮಾಡಿದ ಮಾತ್ರಕ್ಕೆ ನಿಮಗೆ ಮಂತ್ರಿ ಸ್ಥಾನ ಸಿಗದು. ಜೀವನದಲ್ಲಿ ಗಾಂಧಿ ತತ್ವ ಅಳವಡಿಸಿಕೊಳ್ಳಿ. ಇದು ನಾಟಕವಾಗಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.