ಕಾರವಾರ: ರಾಜ್ಯದ ಮೊದಲ ತೇಲುವ ಕಾಂಕ್ರೀಟ್ ಜಟ್ಟಿಯನ್ನು ಸಾಗರಮಾಲಾ ಯೋಜನೆಯಡಿ ಕಾಳಿನದಿ ಅರಬ್ಬಿ ಸಮುದ್ರ ಸೇರುವ ಸಂಗಮ ಪ್ರದೇಶ, ಸದಾಶಿವಗಡ ಗುಡ್ಡದ ತಪ್ಪಲಿನ ಸಮೀಪ ಅಳವಡಿಸಲಾಗಿದೆ.
ಪ್ರವಾಸೋದ್ಯಮ ಉದ್ದೇಶಕ್ಕೆ 12 ಮೀಟರ್ ಉದ್ದ ಮತ್ತು 3 ಮೀಟರ್ ಅಗಲದ ಜಟ್ಟಿಯನ್ನು ಬಂದರು ಇಲಾಖೆ ಮೂಲಕ ಮುಂಬೈ ಮೂಲದ ಮರೈನ್‍ಟೆಕ್ ಇಂಡಿಯಾ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಅಳವಡಿಸಿದೆ.
₹2.70 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ಜಟ್ಟಿ ಅಳವಡಿಕೆ ಕಾರ್ಯ ನೆರವೇರಿದ್ದು, ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರ (ಐಡಬ್ಲ್ಯೂಎಐ) ಆಡಳಿತಾತ್ಮಕ ಅನುಮೋದನೆ ನೀಡಿದೆ.
ತೇಲುವ ಕಾಂಕ್ರೀಟ್ ಜಟ್ಟಿಯನ್ನು ದಡದಿಂದ ಸಂಪರ್ಕಿಸಲು ಅನುಕೂಲವಾಗುವಂತೆ 20 ಮೀಟರ್ ಉದ್ದದ ಉಕ್ಕಿನ ಕಿರು ಸೇತುವೆ (ಗ್ಯಾಂಗ್‍ವೇ) ನಿರ್ಮಿಸಲಾಗಿದೆ. ಜಟ್ಟಿಯಲ್ಲಿ ಆಧುನಿಕ ತಂತ್ರಜ್ಞಾನದ ನ್ಯಾವಿಗೇಶನಲ್ (ಜಲಮಾರ್ಗ) ಉಪಕರಣ ಅಳವಡಿಸಲಾಗಿದೆ. ದೋಣಿಗಳ ಬ್ಯಾಟರಿ ಚಾರ್ಜ್ ಮಾಡಲು ವಿದ್ಯುತ್ ಚಾಲಿತ ಉಪಕರಣ ಸಹ ಇದೆ.
ಸಾಗರಮಾಲಾ ಯೋಜನೆಯಡಿ ಪರಿಸರಸ್ನೇಹಿ ತೇಲುವ ಕಾಂಕ್ರೀಟ್ ಜಟ್ಟಿ ಅಳವಡಿಕೆಗೆ ಉತ್ತರ ಕನ್ನಡದ ನಾಲ್ಕು ದಕ್ಷಿಣ ಕನ್ನಡ ಜಿಲ್ಲೆಯ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಅನುಮೋದನೆ ಸಿಕ್ಕಿದೆ. ಹಂತಹಂತವಾಗಿ ಕೆಲಸ ನಡೆಯಲಿದೆ.–ಕ್ಯಾಪ್ಟನ್ ಸಿ.ಸ್ವಾಮಿ, ನಿರ್ದೇಶಕ ಬಂದರು ಮತ್ತು ಜಲಸಾರಿಗೆ ಮಂಡಳಿ
‘ಜಲಸಾಹಸ ಚಟುವಟಿಕೆಯ ಬೋಟ್, ಪ್ರವಾಸಿಗರನ್ನು ಕರೆದೊಯ್ಯುವ ಬೋಟುಗಳ ನಿಲುಗಡೆಗೆ ಅನುಕೂಲವಾಗುವಂತೆ ಜಟ್ಟಿ ನಿರ್ಮಿಸಲಾಗಿದೆ. ಜಟ್ಟಿಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದು ಬಂದರು ಇಲಾಖೆಯ ಎಂಜಿನಿಯರ್ ಪಾಂಡುರಂಗ ಕುಲಕರ್ಣಿ ತಿಳಿಸಿದರು.
ಗೋವಾ ಗುಜರಾತ್‍ನ ಹಲವೆಡೆ ಪ್ರವಾಸಿ ತಾಣಗಳಲ್ಲಿ ಈಗಾಗಲೇ ತೇಲುವ ಕಾಂಕ್ರೀಟ್ ಜಟ್ಟಿ ಅಳವಡಿಸಲಾಗಿದೆ. ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂತಹ ಸೌಲಭ್ಯ ಪರಿಚಯಿಸಲಾಗಿದೆ.–ಕಾಸ್ಮೆ ಡಿಸಿಲ್ವಾ, ಅಧಿಕಾರಿ ಮರೈನ್‍ಟೆಕ್ ಇಂಡಿಯಾ ಸರ್ವಿಸಸ್ ಕಂಪನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.