ADVERTISEMENT

ಹೊಸ್ತೋಟ ಭಾಗವತರ ಹೆಸರಿನಲ್ಲಿ ಪ್ರಶಸ್ತಿ

ಸಂಸ್ಮರಣೆ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಶ್ರೀ ಪ್ರಕಟ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 15:20 IST
Last Updated 17 ಜನವರಿ 2020, 15:20 IST
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ನಡೆದ ಹೊಸ್ತೋಟ ಭಾಗವತರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹಿಮ್ಮೇಳ ಕಲಾವಿದರು ಕಲಾ ನಮನ ಸಲ್ಲಿಸಿದರು
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ನಡೆದ ಹೊಸ್ತೋಟ ಭಾಗವತರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹಿಮ್ಮೇಳ ಕಲಾವಿದರು ಕಲಾ ನಮನ ಸಲ್ಲಿಸಿದರು   

ಶಿರಸಿ: ಯಕ್ಷಗಾನಕ್ಕಾಗಿಯೇ ಬದುಕನ್ನು ಸಮರ್ಪಿಸಿದ ಹೊಸ್ತೋಟ ಮಂಜುನಾಥ ಭಾಗವತರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಯಕ್ಷಶಾಲ್ಮಲಾ ಸಂಘಟನೆಯಿಂದ ನೀಡುವ ಪ್ರಶಸ್ತಿಯನ್ನು ಇನ್ನು ಮುಂದೆ ಹೊಸ್ತೋಟ ಭಾಗವತರ ಹೆಸರಿನಲ್ಲಿ ನೀಡಲಾಗುವುದು ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರಕಟಿಸಿದರು.

ಯಕ್ಷಶಾಲ್ಮಲಾ ಸಂಸ್ಥೆಯು ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಹೊಸ್ತೋಟ ಭಾಗವತರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಕ್ಷಗಾನ ಕಲೆಗೆ ಮಂಜುನಾಥ ಭಾಗವತರ ಕೊಡುಗೆ ಅಪಾರ. ಸಮರ್ಪಣಾ ಭಾವದ ಸೇವೆ ಸಲ್ಲಿಸಿದ ಅವರು ಯಕ್ಷ ಕ್ಷೇತ್ರದ ಅಗ್ರಗಣ್ಯರು. ಭಾಗವತರು ಹಾಕಿಕೊಟ್ಟ ಯಕ್ಷಗಾನದ ಸೂತ್ರ, ದೃಷ್ಟಿಕೋನವನ್ನು ಮುಂದುವರಿಸುವ ಜವಾಬ್ದಾರಿಯಿದೆ ಎಂದರು.

ಕಾವಿ ತೊಟ್ಟವರೆಲ್ಲ ಸನ್ಯಾಸಿಯಾಗುವುದಿಲ್ಲ. ಕರ್ತವ್ಯದ ಫಲಕ್ಕೆ ಆಸೆ ಪಡದೇ, ಮಾಡುವ ಕರ್ಮದಲ್ಲಿ ನಿಷ್ಠೆಯುಳ್ಳವನು ಯೋಗಿಯಾಗುತ್ತಾನೆ. ಅಂತಹವರಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ಒಬ್ಬರು. ಅವರು ಯಕ್ಷರಂಗದ ಯೋಗಿ. ಕಾಯಕನಿಷ್ಠೆ, ಕರ್ತವ್ಯನಿಷ್ಠೆಗೆ ಹೆಸರಾದ ಭಾಗವತರಂಥ ವ್ಯಕ್ತಿ ಯಕ್ಷಗಾನಕ್ಕೆ ಸಿಕ್ಕ ಫಲವಾಗಿ ಈ ಕಲೆ ಇನ್ನಷ್ಟು ಗಟ್ಟಿಯಾಗಿದೆ ಎಂದು ಹೇಳಿದರು.

ಯಕ್ಷಗಾನ ಭಾಗವತರಾದ ತಿಮ್ಮಪ್ಪ ಭಾಗವತ ಬಾಳೆಹದ್ದ, ಸತೀಶ ಹೆಗಡೆ ದಂಟ್ಕಲ್, ರವೀಂದ್ರ ಭಟ್ಟ ಅಚುವೆ, ಗಜಾನನ ಭಟ್ಟ ತುಳಗೇರಿ ಗಾಯನದಲ್ಲಿ, ಶಂಕರ ಭಾಗವತ, ಗಣಪತಿ ಕವ್ವಾಳೆ, ಶ್ರೀಪತಿ ಹೆಗಡೆ ಕಂಚಿಮನೆ ಮದ್ದಲೆ ಹಾಗೂ ಲಕ್ಷ್ಮೀನಾರಾಯಣ ಸಂಪ ಚಂಡೆಯಲ್ಲಿ ನಮನ ಸಲ್ಲಿಸಿದರು. ಕಲಾವಿದರಾದ ನೀರ್ನಳ್ಳಿ ಗಣಪತಿ ಹಾಗೂ ಸತೀಶ ಯಲ್ಲಾಪುರ ಚಿತ್ರ ನಮನ ಸಲ್ಲಿಸಿದರು. ಪದ್ಮನಾಭ ಆರೇಕಟ್ಟಾ ಕಾವ್ಯ ಕಾವ್ಯನಮನ ಸಲ್ಲಿಸಿದರು.

ADVERTISEMENT

ಶಿವಮೊಗ್ಗದ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ವಿದ್ಯಾರ್ಥಿಗಳು ‘ಗಿರಿಜಾ ಕಲ್ಯಾಣ’ ಯಕ್ಷಗಾನ ಆಖ್ಯಾನದ ಮೂಲಕ ನೃತ್ಯನಮನ ಸಲ್ಲಿಸಿದರು. ಚಿತ್ರನಟ ನೀರ್ನಳ್ಳಿ ರಾಮಕೃಷ್ಣ, ಕೃಷ್ಣ ಭಾಗವತ ಬಾಳೆಹದ್ದ ಅವರು ಭಾವನಮನ ಸಲ್ಲಿಸಿದರು. ವಿದ್ವಾಂಸ ಉಮಾಕಾಂತ ಭಟ್ಟ ಕೆರೆಕೈ, ಪ್ರಗತಿಪರ ಕೃಷಿಕ ಕೆ.ಎಂ.ಹೆಗಡೆ ಭೈರುಂಬೆ, ಉಡುಪಿ ಯಕ್ಷಗಾನ ಕಲಾರಂಗದ ನಾರಾಯಣ ಹೆಗಡೆ, ಯಕ್ಷ ಕಲಾವಿದೆ ವಿಜಯನಳಿನಿ ರಮೇಶ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಯಕ್ಷ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ಮಠದ ಅಧ್ಯಕ್ಷ ವಿ.ಎನ್.ಹೆಗಡೆ, ಮಾತೃಮಂಡಳಿ ಅಧ್ಯಕ್ಷೆ ವೇದಾ ಹೆಗಡೆ ಇದ್ದರು.

ಯಕ್ಷಶಾಲ್ಮಲಾ ಅಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ ಜೋಶಿ ಸ್ವಾಗತಿಸಿದರು. ಸುರೇಶ ಹಕ್ಕೀಮನೆ ನಿರೂಪಿಸಿದರು. ಸುಬ್ರಾಯ ಹೆಗಡೆ ಕೆರೆಕೊಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.