ADVERTISEMENT

ಬಿಜೆಪಿಯ ಭರವಸೆ ಮಾತಿನಲ್ಲಿ ಮಾತ್ರ: ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಭೀಮಣ್ಣ ನಾಯ್ಕ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 12:17 IST
Last Updated 12 ಮಾರ್ಚ್ 2020, 12:17 IST
ಭೀಮಣ್ಣ ನಾಯ್ಕ
ಭೀಮಣ್ಣ ನಾಯ್ಕ   

ಶಿರಸಿ: ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕೆಲವೇ ದಿನಗಳಲ್ಲಿ ಫಾರ್ಮ್‌ ನಂಬರ್ 3, ಇ–ಸ್ವತ್ತು ಸಮಸ್ಯೆ ಬಗೆಹರಿಸುವುದಾಗಿ ಸ್ಥಳೀಯ ಶಾಸಕರು ಹೇಳಿದ್ದರು. ಆದರೆ, ಅಧಿಕಾರ ಹಿಡಿದ ಮೇಲೆ ಈ ಮಾತನ್ನು ಮರೆತಂತಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಟೀಕಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ಸಮ್ಮಿಶ್ರ ಸರ್ಕಾರ ಇದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು, ಮನೆ ಕಟ್ಟಲು, ಅಭಿವೃದ್ಧಿ ಕಾಮಗಾರಿಗೆ ಮರಳು ದೊರಕಿಸುವ ವ್ಯವಸ್ಥೆ ಮಾಡಿದ್ದರು. ಆದರೆ, ಈಗ ಮರಳಿಲ್ಲದೇ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಮಳೆಗಾಲಕ್ಕೆ ಎರಡು ತಿಂಗಳು ಮಾತ್ರ ಇದ್ದರೂ ಇನ್ನೂ ಮರಳು ಸಿಗುತ್ತಿಲ್ಲ’ ಎಂದು ಆರೋಪಿಸಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಜನರ ಮೆಚ್ಚುಗೆ ಗಳಿಸಿತ್ತು. ಆದರೆ ಈಗ ಎರಡೂ ಕಡೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಅವರು ಮಾತಿನಂತೆ ನಡೆಯುತ್ತಿಲ್ಲ. ಹಿಂದಿನ ಸರ್ಕಾರ ಅನುಷ್ಠಾನಗೊಳಿಸಿದ್ದ ಸಾಲಮನ್ನಾ ಯೋಜನೆಯ ₹ 50 ಕೋಟಿ ನೆರವು ಜಿಲ್ಲೆಯ ರೈತರಿಗೆ ಇನ್ನೂ ಬರುವುದು ಬಾಕಿಯಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ ಎಂದು ಹೇಳಿದರು.

ADVERTISEMENT

ಕೆಪಿಸಿಸಿ ನೂತನ ಅಧ್ಯಕ್ಷರ ಸಾರಥ್ಯದಲ್ಲಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯ ತಂತ್ರ ರೂಪಿಸಲಾಗುವುದು. ಈಗಾಗಲೇ ಪಕ್ಷದ ಸಭೆ ನಡೆಸಿ, ಸಂಘಟನೆ ಚುರುಕುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢವಾಗಿದ್ದು, ಬಿಜೆಪಿ ಅಲೆಯನ್ನು ತಡೆಯುವ ಶಕ್ತಿ ಹೊಂದಿದೆ ಎಂದು ಹೇಳಿದರು.

ಪಕ್ಷದ ಪ್ರಮುಖರಾದ ಎಸ್.ಕೆ.ಭಾಗವತ, ಗೀತಾ ಶೆಟ್ಟಿ, ಸಂತೋಷ ಶೆಟ್ಟಿ, ಅಬ್ಬಾಸ್ ತೋನ್ಸೆ, ಬಸವರಾಜ ದೊಡ್ಮನಿ, ದೀಪಕ ದೊಡ್ಡೂರು, ಶೈಲೇಶ್ ಜೋಗಳೇಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.