ADVERTISEMENT

ಮಿತಿ ಮೀರಿ ಸರಕು ಸಾಗಣೆ: ₹ 46 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 15:22 IST
Last Updated 18 ಜೂನ್ 2022, 15:22 IST
ಮಿತಿ ಮೀರಿದ ಸರಕು ಸಾಗಿಸುತ್ತಿದ್ದ ಲಾರಿಯನ್ನು ಕಾರವಾರ ಪೊಲೀಸರು ಜಪ್ತಿ ಮಾಡಿರುವುದು
ಮಿತಿ ಮೀರಿದ ಸರಕು ಸಾಗಿಸುತ್ತಿದ್ದ ಲಾರಿಯನ್ನು ಕಾರವಾರ ಪೊಲೀಸರು ಜಪ್ತಿ ಮಾಡಿರುವುದು   

ಕಾರವಾರ: ಸಾಮರ್ಥ್ಯಕ್ಕಿಂತ ಹೆಚ್ಚು ಸರಕು ಸಾಗಿಸುತ್ತಿದ್ದ ಲಾರಿಯ ಚಾಲಕನಿಗೆ ಇಲ್ಲಿನ ನ್ಯಾಯಾಲಯವು ₹ 46 ಸಾವಿರ ದಂಡ ವಿಧಿಸಿದೆ. ಅಲ್ಲದೇ ವಾಹನದ ಸರಕು ಸಾಗಣೆ ಪರವಾನಗಿ ಹಾಗೂ ಚಾಲಕನ ವಾಹನ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಿದೆ.

ಶಿವಮೊಗ್ಗದ ಮೊಹಮ್ಮದ್ ಅಮೀರ್ ಪಾಷಾ ಶಿಕ್ಷೆಗೆ ಗುರಿಯಾದ ಚಾಲಕ. ಜೂನ್ 16ರಂದು ರಾತ್ರಿ ನಗರದ ಮೂಲಕ ಸಾಗುತ್ತಿದ್ದ ಲಾರಿಯಲ್ಲಿ ಮಿತಿ ಮೀರಿದ ಪ್ರಮಾಣದಲ್ಲಿ ಸ್ಟೀಲ್ ಸರಕು ಸಾಗಿಸಲಾಗುತ್ತಿತ್ತು. ಅಂದು ಗಸ್ತಿನಲ್ಲಿದ್ದ ನಗರದ ಸಂಚಾರ ಠಾಣೆಯ ಪಿ.ಎಸ್.ಐ ನಾಗಪ್ಪ ಮತ್ತು ಸಿಬ್ಬಂದಿ ಗದಿಗೆಪ್ಪ ಚಕ್ರಸಾಲಿ, ಮೌಲಾಲಿ ನದಾಫ್ ಅವರು ತಡೆದು ಪರಿಶೀಲಿಸಿದ್ದರು. ಬಳಿಕ ಲಾರಿಯನ್ನು ಜಪ್ತಿ ಮಾಡಿದ್ದರು.

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕಾರವಾರದ ಹಿರಿಯ ಸಿವಿಲ್ ಹಾಗೂ ಮುಖ್ಯ ನ್ಯಾಯಾಂಗ ನ್ಯಾಯಾಧೀಶರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರೇಷ್ಮಾ ರೋಡ್ರಿಗಸ್ ಅವರು, ವಾಹನ ಚಾಲಕನಿಗೆ ದಂಡ ವಿಧಿಸಿ ಆದೇಶಿಸಿದರು.

ADVERTISEMENT

ಈ ಕಾರ್ಯಾಚರಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್, ಹೆಚ್ಚುವರಿ ವರಿಷ್ಠಾಧಿಕಾರಿ ಬದರಿನಾಥ.ಎಸ್, ಡಿ.ವೈ.ಎಸ್.ಪಿ ವ್ಯಾಲೆಂಟೈನ್ ಡಿಸೋಜಾ, ಇನ್‌ಸ್ಪೆಕ್ಟರ್ ಸಿದ್ದಪ್ಪ ಬೀಳಗಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.