ADVERTISEMENT

ದೈವಜ್ಞ ಬ್ರಾಹ್ಮಣ ಮಹಿಳಾ ಸಮಾವೇಶ 19ರಿಂದ

ಮೊದಲ ಬಾರಿಗೆ ಸಂಘಟಿಸುತ್ತಿರುವ ರಾಷ್ಟ್ರ ಮಟ್ಟದ ಸಮಾವೇಶ, ವಿವಿಧ ರಾಜ್ಯಗಳಿಂದ ಜನರು ಬರುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 12:10 IST
Last Updated 16 ಜನವರಿ 2019, 12:10 IST

ಶಿರಸಿ: ದೈವಜ್ಞ ಮಹಿಳಾ ಸಂಘಟನೆ ಬಲಗೊಳಿಸುವ ಜೊತೆಗೆ ಸಮುದಾಯದ ಸಮಸ್ಯೆಗಳನ್ನು ಚರ್ಚಿಸುವ ಉದ್ದೇಶದಿಂದ ಜ.19 ಹಾಗೂ 20ರಂದು ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ರಾಷ್ಟ್ರ ಮಟ್ಟದ ದೈವಜ್ಞ ಬ್ರಾಹ್ಮಣ ಮಹಿಳಾ ಸಮಾವೇಶ ಸಂಘಟಿಸಲಾಗಿದೆ.

ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಅಧ್ಯಕ್ಷೆ ಸಂಧ್ಯಾ ಕುರ್ಡೇಕರ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಸಮುದಾಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಸಮಾವೇಶ ಆಯೋಜಿಸಲಾಗುತ್ತಿದೆ. ಸಮುದಾಯದ ಹಿರಿಯರು, ಯುವಕ ಮಂಡಗಳು ಬೆನ್ನಿಗೆ ನಿಂತು ಕೆಲಸ ಮಾಡುತ್ತಿವೆ. ಇಲ್ಲಿನ ಮಹಿಳಾ ಮಂಡಳಿಗೆ 35 ವರ್ಷಗಳ ಇತಿಹಾಸವಿದೆ. ಸಾಮಾಜಿಕ ಚಿಂತನೆಯ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸಮುದಾಯದ ಸಾಧಕರನ್ನು, ರಾಜ್ಯದಲ್ಲಿರುವ 48 ದೈವಜ್ಞ ಮಹಿಳಾ ಮಂಡಳಿಗಳನ್ನು ಒಟ್ಟಿಗೆ ಸೇರಿಸಿ, ವಿವಿಧ ವಿಷಯಗಳನ್ನು ಚರ್ಚಿಸಲು ಈ ಸಮಾವೇಶ ವೇದಿಕೆಯಾಗಲಿದೆ ಎಂದರು.

ಅಖಿಲ ಭಾರತೀಯ ದೈವಜ್ಞ ಬ್ರಾಹ್ಮಣ ಸಮಾಜೋನ್ನತಿ ಪರಿಷದ್ ಹಾಗೂ ಮಹಿಳಾ ವಿಭಾಗ ಮುಂಬೈ, ಶಿರಸಿ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಜಂಟಿಯಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಗೋವಾದ 800ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಮಕ್ಕಳೊಂದಿಗೆ ಅಪ್ಪಂದಿರು ತೆಗೆದಿರುವ ಸೆಲ್ಫಿ ಸ್ಪರ್ಧೆ ವಿಜೇತರಿಗೆ ಬಹುಮಾನ, ಸಾಧಕ 10 ಮಹಿಳೆಯರಿಗೆ ಸನ್ಮಾನ ನೀಡಲಾಗುತ್ತದೆ ಎಂದು ತಿಳಿಸಿದರು.

ADVERTISEMENT

'ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವಲ್ಲಿ ತಾಯಿಯ ಪಾತ್ರ', 'ಮಹಿಳಾ ಸಬಲೀಕರಣ', ‘ಸರ್ಕಾರಿ ಸೌಲಭ್ಯಗಳು ಹಾಗೂ ಅವುಗಳ ಪಡೆಯುವ ವಿಧಾನ' ಕುರಿತು ಗೋಷ್ಠಿಗಳು ನಡೆಯುತ್ತವೆ. 19ರ ಬೆಳಿಗ್ಗೆ 10 ಗಂಟೆಗೆ ಕರ್ಕಿ ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಸಮಾಜೋನ್ನತಿ ಪರಿಷದ್ ಅಧ್ಯಕ್ಷ ದಿನಕರ ಬೈಕೇರಿಕರ್ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಉಪಕುಲಪತಿ ಡಾ.ಸುಧಾರಾವ್, ಕೊಲ್ಲಾಪುರ ಸಂಜಯ ಘೋಡಾವತ್‌ ವಿಶ್ವವಿದ್ಯಾಲಯದ ಉಪಕುಲಪತಿ ವೆಂಕಟೇಶ ರಾಯ್ಕರ್, ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ ಅನುರಾಧ ಜಿ, ದೈವಜ್ಞ ಬ್ರಾಹ್ಮಣ ಸಂಘದ ರಾಜ್ಯಾಧ್ಯಕ್ಷ ರಾಮರಾವ್ ರಾಯ್ಕರ್, ಮಹಿಳಾ ಸಂಘದ ಅಧ್ಯಕ್ಷೆ ವಿನಯಾ ರಾಯ್ಕರ್ ಉಪಸ್ಥಿತರಿರುವರು ಎಂದರು.

ಪ್ರಮುಖರಾದ ಚಂದ್ರಹಾಸ ಶೇಟ್, ಅರುಣಾ ವೇರ್ಣೇಕರ, ಪ್ರೇಮಾ ಶೇಟ್, ವಿನೋದಾ ಶೇಟ್, ಲೀಲಾವತಿ ರಾಯಕರ, ಸವಿತಾ ರೇವಣಕರ, ಉದಯಕುಮಾರ ಕಾನಳ್ಳಿ, ಡಿ.ವಿಜಯಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.