ADVERTISEMENT

ಶಿರಸಿ: ವಿಧಾನಸಭಾಧ್ಯಕ್ಷರ ಕಚೇರಿ ಎದುರು ಧರಣಿ

ಅರಣ್ಯವಾಸಿಗಳ ಪರ ಅಫಿಡವಿಟ್ ಸಲ್ಲಿಕೆಗೆ ಒತ್ತಾಯ: ಧರಣಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 8:50 IST
Last Updated 2 ಅಕ್ಟೋಬರ್ 2022, 8:50 IST
 ವಿಧಾನಸಭಾಧ್ಯಕ್ಷರ ಕಚೇರಿ ಎದುರು ಧರಣಿ
ವಿಧಾನಸಭಾಧ್ಯಕ್ಷರ ಕಚೇರಿ ಎದುರು ಧರಣಿ   

ಶಿರಸಿ: ಅರಣ್ಯವಾಸಿಗಳ ಪರ ಸುಪ್ರಿಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸುವ ಕುರಿತು ಸರ್ಕಾರದ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಆಗ್ರಹಿಸಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರು ಭಾನುವಾರ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿ ಎದುರುಪ್ರತಿಭಟಿಸಿದರು.

ಇಲ್ಲಿನ ಬಿಡ್ಕಿಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆ ಗೌರವ ಅರ್ಪಿಸಿದ ಬಳಿಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮುಖ್ಯ ರಸ್ತೆಗಳ ಮೂಲಕ ವಿಧಾನಸಭಾಧ್ಯಕ್ಷರ ಕಚೇರಿವರೆಗೆ ಮೆರವಣಿಗೆ ಸಾಗಿತು.

ವಿಧಾನಸಭಾಧ್ಯಕ್ಷರ ಕಚೇರಿ ಎದುರು ಅರಣ್ಯ ಭೂಮಿ ಹಕ್ಕಿಗಾಗಿ ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ತಾಸುಗಳಿಗೂ ಹೆಚ್ಚು ಕಾಲ ಪ್ರತಿಭಟಿಸಿದರು.

ADVERTISEMENT

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, 'ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಕೇಳಲು ಐದು ಸಾವಿರಕ್ಕಿಂತ ಹೆಚ್ಚು ಪ್ರತಿಭಟನೆ ನಡೆಸಿದ್ದೇವೆ. ಅರಣ್ಯ ಭೂಮಿ ಹಕ್ಕು ಸಿಗುವವರೆಗೂ ಹೋರಾಟ ಕೈಬಿಡಲಾಗದು' ಎಂದರು.

'ಸುಪ್ರಿಂ ಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದರೆ ಅರಣ್ಯವಾಸಿಗಳು ನೆಲೆ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೆ ಜಿಲ್ಲೆಯ 85 ಸಾವಿರ ಕುಟುಂಬಗಳು ಸಲ್ಲಿಸಿದ್ದ ಅರಣ್ಯ ಹಕ್ಕು ಅರ್ಜಿಯಲ್ಲಿ 69 ಸಾವಿರ ಅರ್ಜಿ ತಿರಸ್ಕೃತಗೊಂಡಿದೆ. ಇವರೆಲ್ಲರ ಸ್ಥಿತಿ ಡೋಲಾಯಮಾನವಾಗಿದೆ' ಎಂದರು.

'ರಾಜ್ಯ ಸರ್ಕಾರ ಅರಣ್ಯವಾಸಿಗಳ ಪರ ಸುಪ್ರಿಂಕೋರ್ಟ್ ನಲ್ಲಿ 15 ದಿನದಲ್ಲಿ ಅಫಿಡವಿಟ್ ಸಲ್ಲಿಸಬೇಕು. ಈ ಬಗ್ಗೆ ವಿಧಾನಸಭಾಧ್ಯಕ್ಷರು ಸ್ಪಷ್ಟಪಡಿಸಬೇಕು' ಎಂದರು.

'ಸಮರ್ಪಕ ಜಿಪಿಎಸ್ ಮಾಡಿಲ್ಲ. ಪ್ರತಿ ನೂರಕ್ಕೆ ಏಳು ಅರ್ಜಿಗಳಿಗೆ ಜಿಪಿಎಸ್ ಮಾಡಿಲ್ಲ' ಎಂದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಸಮಸ್ಯೆ ಆಲಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, 'ಅರಣ್ಯ ವಾಸಿಗಳ ಪರವಾಗಿ ನಿರಂತರವಾಗಿ ಇರಲಾಗುವುದು. ಸುಪ್ರಿಂಕೋರ್ಟ್ ನಲ್ಲಿ ಸಮರ್ಥ ವಾದ ಮಂಡಿಸಿ, ಅರಣ್ಯವಾಸಿಗಳ ಪರ ಅಫಿಡವಿಟ್ ಸಲ್ಲಿಸುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ತಜ್ಞರ ಮೂಲಕ ಮಾಹಿತಿ ಪಡೆಯಲಾಗುವುದು' ಎಂದು ಭರವಸೆ ನೀಡಿದರು.

ಸಭಾಧ್ಯಕ್ಷರ ಭರವಸೆಗೆ ಬಗ್ಗದ ಪ್ರತಿಭಟನಾಕಾರರು ಕೆಲವು ನಿಮಿಷ ಪ್ರತಿಭಟಿಸಿ ತೆರಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, 'ಅರಣ್ಯವಾಸಿಗಳು ಇನ್ನೂ ಭೂಮಿ ಹಕ್ಕಿಗೆ ಹೋರಾಟ ನಡೆಸುತ್ತಿದ್ದಾರೆಂದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೆ ಎಂಬ ಸಂದೇಹ ಮೂಡಿದೆ. ಅಧಿಕಾರಕ್ಕೆ ಏರಿದ್ದು ಜನರ ಸಮಸ್ಯೆ ನಿವಾರಿಸುವ ಸಲುವಾಗಿಯೋ ಅಥವಾ ಹಣ, ಹುದ್ದೆ ಸಂಪಾದನೆಗೊ' ಎಂದು ಪ್ರಶ್ನಿಸಿದರು.

ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, 'ಜನರ ಕೂಗಿನ ಶಕ್ತಿ ವಿಧಾನಸಭೆ, ಸಂಸತ್ ನಲ್ಲಿ ಪ್ರತಿಧ್ವನಿಸುತ್ತಿಲ್ಲ. ಸರ್ಕಾರಕ್ಕೆ ಸಾಮಾನ್ಯ ಜನರ ಸಂಕಷ್ಟ ಇನ್ನೂ ಅರಿವಿಗೆ ಬಂದಂತಿಲ್ಲ. ಆದರೂ, ನಿರಂತರ ಹೋರಾಟ ಮಾಡುತ್ತಿರುವ ಅರಣ್ಯವಾಸಿಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕುವೆ' ಎಂದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ಶ್ರೀನಿವಾಸ, 'ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸುವುದನ್ನು ಬಿಟ್ಟು ಮುಂದಿನ ಚುನಾವಣೆಗೆ ಹಣ ಕೂಡಿಸುವ ಕೆಲಸ ಮಾಡಬೇಕು. ಅರಣ್ಯವಾಸಿಗಳಿಗೆ ಹಕ್ಕು ಪತ್ರ ನೀಡಲಾಗದಿದ್ದರೆ ಜನಪ್ರತಿನಿಧಿಗಳು ರಾಜೀನಾಮೆ ನೀಡಲಿ' ಎಂದರು.

ಪ್ರಮುಖರಾದ ಜಿ.ಎಂ.ಶೆಟ್ಟಿ ಅಚವೆ, 'ಹೋರಾಟ ಯಾರ ವಿರುದ್ಧವೂ ಅಲ್ಲ, ಪರವೂ ಅಲ್ಲ. ಸ್ವಾತಂತ್ರ್ಯ ದೊರೆತು ಏಳೂವರೆ ದಶಕ ಕಳೆದರೂ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಸಿಗದಿರುವುದು ದುರಂತ' ಎಂದರು.

ಪ್ರಮುಖರಾದ ಪ್ರದೀಪ ಶೆಟ್ಟಿ, ಲಕ್ಷ್ಮಣ ಮಾಳಕ್ಕನವರ್, ದೇವರಾಜ ಮರಾಠಿ, ರಾಘವೇಂದ್ರ ನಾಯ್ಕ, ಬಾಲಚಂದ್ರ ಶೆಟ್ಟಿ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.