ADVERTISEMENT

‘ಸಮಯ ಪ್ರಜ್ಞೆಯಿಂದ ಪ್ರಾಣದ ರಕ್ಷಣೆ’

ವಿಪತ್ತು ನಿರ್ವಹಣಾ ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 13:40 IST
Last Updated 24 ಸೆಪ್ಟೆಂಬರ್ 2020, 13:40 IST
ಕಾರವಾರದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ‘ವಿಪತ್ತು ನಿರ್ವಹಣಾ ಸ್ವಯಂ ಸೇವಕರಿಗೆ ವಿಶೇಷ ತರಬೇತಿ ಶಿಬಿರ’ದಲ್ಲಿ ಡಿ.ವೈ.ಎಸ್.ಪಿ ಎಸ್.ಬದರಿನಾಥ ಮಾತನಾಡಿದರು
ಕಾರವಾರದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ‘ವಿಪತ್ತು ನಿರ್ವಹಣಾ ಸ್ವಯಂ ಸೇವಕರಿಗೆ ವಿಶೇಷ ತರಬೇತಿ ಶಿಬಿರ’ದಲ್ಲಿ ಡಿ.ವೈ.ಎಸ್.ಪಿ ಎಸ್.ಬದರಿನಾಥ ಮಾತನಾಡಿದರು   

ಕಾರವಾರ: ‘ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಮಯ ಪ್ರಜ್ಞೆಯಿಂದ ಕೆಲಸ ಮಾಡಬೇಕು. ತುರ್ತು ಸಂದರ್ಭದಲ್ಲಿ ರಕ್ಷಣೆಯ ಬಗ್ಗೆ ಸ್ಥಳೀಯವಾಗಿ ಯುವಕರಿಗೆ ತರಬೇತಿ ನೀಡಿದರೆ ಪ್ರಾಣದ ರಕ್ಷಣೆ ಸಾಧ್ಯವಿದೆ’ ಎಂದು ಡಿ.ವೈ.ಎಸ್‌.ಪಿ ಎಸ್.ಬದರಿನಾಥ ಅಭಿಪ್ರಾಯಪಟ್ಟರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ವಿಪತ್ತು ನಿರ್ವಹಣಾ ಸ್ವಯಂ ಸೇವಕರಿಗೆ ವಿಶೇಷ ತರಬೇತಿ ಶಿಬಿರ’ದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭ ಪರಿಸ್ಥಿತಿ ತುಂಬ ಕಠಿಣವಾಗಿರುತ್ತದೆ. ಅಂತಹ ಸಂದರ್ಭವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವ ಸಲುವಾಗಿ ಪ್ರತಿ ತಾಲ್ಲೂಕಿನಲ್ಲೂ ತರಬೇತಿ ಆಯೋಜಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.

ADVERTISEMENT

ತಹಶೀಲ್ದಾರ್ ಆರ್.ವಿ.ಕಟ್ಟಿ ಮಾತನಾಡಿ, ‘ಕೋವಿಡ್ ಸೋಂಕು ಹಬ್ಬಿರುವ ಈಗಿನ ಸಂದರ್ಭದಲ್ಲಿ ಜನರಿಗೆ ಅರಿವು ಮೂಡಿಸಬೇಕು. ಜನರು ಅನಗತ್ಯವಾಗಿ ಮನೆಗಳಿಂದ ಹೊರಗೆ ಬಾರದಂತೆ ಹಾಗೂ ಬಂದಾಗ ಕಡ್ಡಾಯವಾಗಿ ಮುಖಗವಸು ಧರಿಸುವಂತೆ ಸ್ವಯಂ ಸೇವಕರು ಮನವರಿಕೆ ಮಾಡಿಸಬೇಕು’ ಎಂದು ತಿಳಿಸಿದರು.

ಆಶಯ ನುಡಿಗಳನ್ನಾಡಿದ ‘ಜನಜಾಗೃತಿ’ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ವಿವೇಕ ವಿನ್ಸೆಂಟ್ ಪಾಯಸ್, ‘ರಾಜ್ಯದ ವಿವಿಧೆಡೆ ಪದೇದೇ ಆಗುತ್ತಿರುವ ನೆರೆ ಪರಿಸ್ಥಿತಿಯನ್ನು ಗಮನಿಸಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಪ್ರಾಕೃತಿಕ ವಿಕೋಪ ನಿರ್ವಹಣೆಗೆ ದೊಡ್ಡ ತಂಡ ನಿರ್ಮಿಸುತ್ತಿದ್ದಾರೆ. ಅದರೊಂದಿಗೆ ಕೆಲಸ ಮಾಡಲು ಸ್ಥಳೀಯ ತಂಡದ ಅಗತ್ಯವಿದೆ. ಈ ಕಾರ್ಯಕ್ಕೆ ₹ 85 ಲಕ್ಷವನ್ನು ಮೀಸಲಿಟ್ಟಿದ್ದಾರೆ. ಈ ಘಟಕಗಳು ಇರುವ ತಾಲ್ಲೂಕುಗಳಲ್ಲಿ ತಹಶೀಲ್ದಾರರೇ ಅದರ ಮುಖ್ಯಸ್ಥರಾಗಿರುತ್ತಾರೆ’ ಎಂದು ವಿವರಿಸಿದರು.

‘ಕಾರವಾರದಲ್ಲಿ ರಾಜ್ಯದ ಒಂಬತ್ತನೇ ಘಟಕವನ್ನು ಆರಂಭಿಸಲಾಗಿದೆ. ಈ ವರ್ಷ 20ರಿಂದ 25 ತಾಲ್ಲೂಕುಗಳು, ಮುಂದಿನ ವರ್ಷ ಸರ್ಕಾರವು ಗುರುತಿಸಿದ ಎಲ್ಲ ಸೂಕ್ಷ್ಮ ತಾಲ್ಲೂಕುಗಳಲ್ಲಿ ಘಟಕಗಳನ್ನು ತೆರೆಯಲಾಗುವುದು. ಇಡೀ ರಾಜ್ಯದಲ್ಲಿ ಒಟ್ಟು 60 ಘಟಕಗಳನ್ನು ತೆರೆಯುವ ಗುರಿ ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಗಂಗಾಧರ ಭಟ್ ಮಾತನಾಡಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಕಮಾಂಡರ್ ಶಾಂತಿಲಾಲ್ ಜ್ಯೋತಿಯಾ, ಯೋಜನೆಯ ಜಿಲ್ಲಾ ವಿಭಾಗದ ನಿರ್ದೇಶಕ ಶಂಕರ ಶೆಟ್ಟಿ, ಜನಜಾಗೃತಿ ವೇದಿಕೆ ಸದಸ್ಯೆ ಅನು ಕಳಸ, ಪ್ರಮುಖರಾದ ವಿವೇಕಾನಂದ, ಜಯಂತ ಪಟಗಾರ್ ಇದ್ದರು. ಯೋಜನಾಧಿಕಾರಿ ಶೇಖರ ನಾಯ್ಕ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.