ADVERTISEMENT

ಶಿರಸಿ: ಪ್ರಚಾರದಲ್ಲಿ ಬಿಜೆಪಿ ಮುಂದೆ, ಮೈತ್ರಿಗೆ ಸಂಘಟನೆಯೇ ಸವಾಲು

ಬಿಸಿಲಿಗೆ ಕಂಗಾಲಾಗಿರುವ ಕಾರ್ಯಕರ್ತರು, ಸಂಜೆ ವೇಳೆ ಪ್ರಚಾರಕ್ಕೆ ಒತ್ತು

ಸಂಧ್ಯಾ ಹೆಗಡೆ
Published 11 ಏಪ್ರಿಲ್ 2019, 7:04 IST
Last Updated 11 ಏಪ್ರಿಲ್ 2019, 7:04 IST
ಮನೆ–ಮನೆ ಭೇಟಿ ನೀಡಿ ಕರಪತ್ರ ನೀಡುವ ಬಿಜೆಪಿ ಕಾರ್ಯಕರ್ತರು
ಮನೆ–ಮನೆ ಭೇಟಿ ನೀಡಿ ಕರಪತ್ರ ನೀಡುವ ಬಿಜೆಪಿ ಕಾರ್ಯಕರ್ತರು   

ಶಿರಸಿ: ಮೈತ್ರಿ ಪಕ್ಷದೊಳಗಿನ ಬೇಗುದಿ ಶಮನಗೊಳಿಸುವಲ್ಲೇ ಜೆಡಿಎಸ್ ಹೈರಾಣಾಗಿದ್ದರೆ, ಚುನಾವಣೆಗೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿರುವ ಬಿಜೆಪಿ ಪ್ರಚಾರದಲ್ಲಿ ಮುಂಚೂಣಿಯಲ್ಲಿದೆ.

ನೆತ್ತಿಸುಡುವ ಬಿಸಿಲಿಗೆ ಕಂಗಾಲಾಗಿರುವ ಬಿಜೆಪಿ ಕಾರ್ಯಕರ್ತರು, ಬೆಳಿಗ್ಗೆ ಸೂರ್ಯ ಉದಯಿಸುವ ಹೊತ್ತಿಗೆ ಹಾಗೂ ಸಂಜೆ ಬಿಸಿಲು ತಣಿದ ಮೇಲೆ ಪ್ರಚಾರಕ್ಕೆ ತೆರಳುತ್ತಿದ್ದಾರೆ. ‘ಮೊದಲ ಹಂತದ ಮನೆ–ಮನೆ ಪ್ರಚಾರ ಅಂತಿಮ ಹಂತದಲ್ಲಿದೆ. ಪ್ರತಿ ಬೂತ್‌ನಲ್ಲಿ ಕಾರ್ಯಕರ್ತರು ತಂಡ ರಚಿಸಿಕೊಂಡು, ಪ್ರತಿ ಮನೆಗೆ ಭೇಟಿ ನೀಡಿ, ಮೋದಿ ಸಾಧನೆಯ ಕರಪತ್ರ, ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಅವರ ಮನವಿಯನ್ನು ನೀಡುತ್ತಾರೆ. ಜತೆಗೆ ‘ನಮ್ಮ ಮನೆ ಬಿಜೆಪಿ ಮನೆ’ ಸ್ಟಿಕರ್ ಕೊಟ್ಟು, ಮನೆಯಲ್ಲಿ ಅಂಟಿಸುವಂತೆ ವಿನಂತಿಸುತ್ತೇವೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ.

‘ಬೆಳಿಗ್ಗೆ 7.30ರಿಂದ 9ರವರೆಗೆ ಹಾಗೂ ಸಂಜೆ 5ರಿಂದ ಸುಮಾರು ರಾತ್ರಿ 9 ಗಂಟೆಯವರೆಗೆ ಪ್ರಚಾರ ಜೋರಾಗಿರುತ್ತದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಈ ತಂತ್ರ ಅನುಸರಿಸುತ್ತಿದ್ದೇವೆ. ಗ್ರಾಮೀಣ ಭಾಗದಲ್ಲಿ ದಿನವೊಂದಕ್ಕೆ 40ರಷ್ಟು ಮನೆಗಳನ್ನು ಸಂಪರ್ಕಿಸುತ್ತೇವೆ. ಏ.10ರ ನಂತರ ಎರಡನೇ ಸುತ್ತಿನ ಪ್ರಚಾರ ಆರಂಭವಾಗುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದರು.

ADVERTISEMENT

ಪೇಜ್ ಪ್ರಮುಖ್ ನೇಮಕ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ‘ಪೇಜ್ ಪ್ರಮುಖ್’ ಜವಾಬ್ದಾರಿಯನ್ನು ಕಾರ್ಯಕರ್ತರಿಗೆ ವಹಿಸುವ ಮೂಲಕ, ಮತದಾನದ ಪ್ರಮಾಣ ಹೆಚ್ಚಳ ಹಾಗೂ ಮತ ಬ್ಯಾಂಕ್‌ ಅನ್ನು ಭದ್ರಗೊಳಿಸಿಕೊಂಡಿರುವ ಬಿಜೆಪಿ ಈ ಬಾರಿಯೂ ಪೇಜ್ ಪ್ರಮುಖ್ ನೇಮಕಕ್ಕೆ ಒತ್ತು ನೀಡಿದೆ.

‘ಪ್ರತಿ ಬೂತ್‌ನಲ್ಲಿ ಪೇಜ್ ಪ್ರಮುಖ್ ನೇಮಕ ಪೂರ್ಣಗೊಳಿಸಲಾಗಿದೆ. ಮತದಾರರ ಪಟ್ಟಿಯಲ್ಲಿರುವ ಒಂದು ಪುಟದ ಸುಮಾರು 30 ಮತಗಳ ಜವಾಬ್ದಾರಿಯನ್ನು ಒಬ್ಬರಿಗೆ ವಹಿಸಲಾಗುತ್ತದೆ. ಆ ಮತದಾರರ ನಿರಂತರ ಸಂಪರ್ಕ, ಅವರು ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳುವ ಹೊಣೆಗಾರಿಕೆಯನ್ನು ಪೇಜ್ ಪ್ರಮುಖ್ ನಿರ್ವಹಿಸಬೇಕಾಗುತ್ತದೆ. ಕೆಲವು ಕಡೆಗಳಲ್ಲಿ ಮಜಿರೆ ಪ್ರಮುಖರನ್ನು ಸಹ ನೇಮಿಸಲಾಗಿದೆ’ ಎಂದು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ.ಹೆಗಡೆ ಚಿಪಗಿ ತಿಳಿಸಿದರು.

ಅಬ್ಬರವಿಲ್ಲದ ಪ್ರಚಾರ:

ಬಿಜೆಪಿ ಕಾರ್ಯಕರ್ತರು ಒಂದನೇ ಸುತ್ತಿನ ಪ್ರಚಾರದಲ್ಲಿದ್ದರೆ, ಆರ್‌ಎಸ್‌ಎಸ್ ಕಾರ್ಯಕರ್ತರು ಈಗಾಗಲೇ ಕ್ಷೇತ್ರದಲ್ಲಿ ಶೇ 70ರಷ್ಟು ಮನೆಗಳನ್ನು ಸಂಪರ್ಕಿಸಿ, ರಾಷ್ಟ್ರೀಯತೆ ಬೆಂಬಲಿಸುವ ಅಭ್ಯರ್ಥಿಗೆ ಮತ ನೀಡುವಂತೆ ವಿನಂತಿಸಿದ್ದಾರೆ. ತಿಂಗಳ ಹಿಂದಿನಿಂದ ಅವರ ಪರೋಕ್ಷ ಪ್ರಚಾರ ಆರಂಭವಾಗಿದೆ. ಪಕ್ಷದ ಬ್ಯಾನರ್‌ಗಳು, ಪಕ್ಷದ ಶಾಲು ಹಾಕಿಕೊಂಡು ತಿರುಗುವ ಕಾರ್ಯಕರ್ತರ ಭರಾಟೆ ಎಲ್ಲೂ ಕಾಣುತ್ತಿಲ್ಲ. ಅಬ್ಬರವಿಲ್ಲದೇ ತಳಮಟ್ಟದಿಂದ ಪ್ರಚಾರ ನಡೆಸುವ ತಂತ್ರಗಾರಿಕೆಯನ್ನು ಬಿಜೆಪಿ ಈ ಬಾರಿ ಅನುಸರಿಸುತ್ತಿದೆ.

ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರಿಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ಓಲೈಸುವಲ್ಲೇ ದಿನಗಳು ಕಳೆಯುತ್ತಿವೆ. ಇದರಿಂದಾಗಿ ಜೆಡಿಎಸ್‌ನ ಹಲವಾರು ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ. ಮೂಲ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದು ಅವರ ಬಲವಾದ ಆರೋಪ. ಮೈತ್ರಿ ಅಭ್ಯರ್ಥಿಯೆದುರು ಸಾಲು ಸಾಲು ಸವಾಲುಗಳಿದ್ದರೆ, ಬಿಜೆಪಿ ಆಂತರಿಕ ಅಸಮಾಧಾನ ಬದಿಗಿಟ್ಟು, ಮೋದಿ ಜಪದಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.