ADVERTISEMENT

ತ್ಯಾಜ್ಯ ವಿಲೇವಾರಿಗೆ ವಿಶೇಷ ನಿಗಾ

ಕ್ವಾರಂಟೈನ್‌ನಲ್ಲಿವವರ ಮನೆ ಕಸ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ

ಸಂಧ್ಯಾ ಹೆಗಡೆ
Published 15 ಮೇ 2020, 14:11 IST
Last Updated 15 ಮೇ 2020, 14:11 IST
ನಗರಸಭೆ ಸಿಬ್ಬಂದಿ ಸಂಗ್ರಹಿಸಿದ ಕ್ವಾರಂಟೈನ್ ಮನೆಯ ತ್ಯಾಜ್ಯ
ನಗರಸಭೆ ಸಿಬ್ಬಂದಿ ಸಂಗ್ರಹಿಸಿದ ಕ್ವಾರಂಟೈನ್ ಮನೆಯ ತ್ಯಾಜ್ಯ   

ಶಿರಸಿ: ನಗರದ ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ನಗರಸಭೆ, ಹೊರ ಜಿಲ್ಲೆಯಿಂದ ಬಂದು ಕ್ವಾರಂಟೈನ್‌ನಲ್ಲಿರುವವರ ಮನೆಗಳ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ವಾಹನ ನಿಗದಿಪಡಿಸಿದೆ.

ಆರೋಗ್ಯ ಇಲಾಖೆ ನೀಡಿರುವ ಯಾದಿಯಂತೆ ನಗರದಲ್ಲಿ ಕ್ವಾರಂಟೈನ್ ನಲ್ಲಿರುವ ಸುಮಾರು 75 ಮನೆಗಳಿವೆ. ನಗರಸಭೆಯ ಇಬ್ಬರು ಸಿಬ್ಬಂದಿ ಎಲ್ಲ ಸುರಕ್ಷಾ ಸಾಧನಗಳನ್ನು ಧರಿಸಿ, ಈ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುತ್ತಾರೆ. ಈ ಎಲ್ಲ ಮನೆಗಳಿಗೆ ಹಳದಿ ಬಣ್ಣದ ಕ್ಲೋರಿನೇಟೆಡ್ ಕವರ್‌ಗಳಲ್ಲಿ ಹಸಿ ಹಾಗೂ ಒಣ ಕಸ ಬೇರ್ಪಡಿಸಿ ಕೊಡುವಂತೆ ತಿಳಿಸಲಾಗಿದೆ.

’ಒಣ ಕಸಗಳನ್ನು ಬಯೊಮೆಡಿಕಲ್ ವೇಸ್ಟ್‌ ಎಂದು ಪರಿಗಣಿಸುವುದರಿಂದ ಎಲ್ಲ ತ್ಯಾಜ್ಯಗಳನ್ನು ಸಂಗ್ರಹಿಸಿ, ಆರೋಗ್ಯ ಇಲಾಖೆಗೆ ನೀಡಲಾಗುತ್ತದೆ. ಅದು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತದೆ. ಹಸಿ ಕಸವನ್ನು ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ದೊಡ್ಡ ಗುಂಡಿಯಲ್ಲಿ ಹೈಪೊಕ್ಲೋರೈಡ್ ಸಿಂಪರಣೆ ಮಾಡಿ, ಸುಣ್ಣ, ಬ್ಲೀಚಿಂಗ್ ಪೌಡರ್ ಹಾಕಿ, ಅದರ ಮೇಲೆ ಒಂದು ಪದರ ಮಣ್ಣನ್ನು ಹಾಕಲಾಗುತ್ತದೆ. ಪ್ರತಿ ದಿನ ಈ ಪ್ರಕ್ರಿಯೆ ನಡೆಸಲಾಗುತ್ತದೆ ಎಂಧು ನಗರಸಭೆ ಪರಿಸರ ಎಂಜಿನಿಯರ್ ಶಿವರಾಜ ತಿಳಿಸಿದರು.

ADVERTISEMENT

’ನಗರದಲ್ಲಿ ಪ್ರತಿದಿನ ಮನೆ–ಮನೆ ಕಸ, ಬೀದಿ ಬದಿ ತ್ಯಾಜ್ಯ ಸೇರಿ 20 ಟನ್‌ನಷ್ಟು ಕಸ ಸಂಗ್ರಹವಾಗುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ವಾಣಿ್ಜ್ಯ ಚಟುವಟಿಕೆಗಳು ಬಂದಾಗಿದ್ದರಿಂದ 5–6 ಟನ್‌ನಷ್ಟು ತ್ಯಾಜ್ಯ ಕಡಿಮೆಯಾಗುತ್ತಿತ್ತು. ಪ್ಲಾಸ್ಟಿಕ್ ತ್ಯಾಜ್ಯಗಳು ಸಹ ತೀರಾ ಕಡಿಮೆಯಾಗಿದ್ದವು. ಈಗ ಲಾಕ್‌ಡೌನ್ ತೆರವಾದ ಮೇಲೆ ಮತ್ತೆ ಎರಡು ಟನ್‌ನಷ್ಟು ಕಸ ಹೆಚ್ಚಾಗಿದೆ‘ ಎಂದು ಅವರು ಪ್ರತಿಕ್ರಿಯಿಸಿದರು.

ಸ್ಯಾನಿಟೈಸೇಷನ್ ಟನಲ್

ಮನೆ ಮನೆ ಕಸ ಸಂಗ್ರಹಕ್ಕೆ ತೆರಳುವ ಪೌರಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ನಗರಸಭೆ ಸ್ಯಾನಿಟೈಸೇಷನ್ ಟನಲ್ ರೂಪಿಸಿದೆ. ಜಿಲ್ಲೆಯಲ್ಲಿ ಪ್ರಥಮವಾಗಿ ಸಿದ್ಧಪಡಿಸಿರುವ ಸ್ಯಾನಿಟೈಜೆಷನ್ ಟನಲ್ ವಾರದಿಂದೀಚೆಗೆ ಕಾರ್ಯನಿರ್ವಹಿಸುತ್ತಿದೆ.

ಕಾರ್ಮಿಕರು ಬೆಳಿಗ್ಗೆ ಕೆಲಸಕ್ಕೆ ತೆರಳುವಾಗ ಹಾಗೂ ವಾಪಸ್ ಬಂದ ನಂತರ ನಗರಸಭೆ ಎದುರಿನಲ್ಲಿ ಇಟ್ಟಿರುವ ಈ ಗೂಡಿನಲ್ಲಿ ಪ್ರವೇಶಿಸಿದರೆ, ಸೆನ್ಸರ್ ಅಳವಡಿಸಿರುವ ಈ ಗೂಡು ಸ್ವಯಂ ಚಾಲಿತವಾಗಿ ಕಾರ್ಯ ಮಾಡುತ್ತದೆ. ಸ್ಯಾನಿಟೈಸೇಷನ್‌ಗೆ ತೆರಳುವ ಪೌರಕಾರ್ಮಿಕರು ಓವರ್ ಗೌನ್, ಗಮ್ ಬೂಟ್, ಗ್ಲೌಸ್, ಮಾಸ್ಕ್ ಧರಿಸಿ, ಇದರೊಳಗೆ ಪ್ರವೇಶಿಸಬೇಕು. ಪ್ರತಿ ದಿನ 11 ಪೌರ ಕಾರ್ಮಿಕರನ್ನು ಸ್ಯಾನಿಟೈಸೇಷನ್‌ಗೆ ಒಳಪಡಿಸಲಾಗುತ್ತದೆ. ವಾರಕ್ಕೆ 2–3 ಬಾರಿ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ಶಿವರಾಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.