ಮುಂಡಗೋಡ: ತಾಲ್ಲೂಕಿನಲ್ಲಿ ಮಂಗಳವಾರ ನಸುಕಿನಿಂದ ಗುಡುಗು ಸಹಿತ ಬಿರುಸಿನ ಮಳೆ ಆಗಿದ್ದು, ಗದ್ದೆಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ.
ತಾಲ್ಲೂಕಿನ ಬಾಚನಕಿ ಸನಿಹ ಮುಂಡಗೋಡ– ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಮೇಲೆ ಮರವೊಂದು ಬಿದ್ದ ಪರಿಣಾಮ, ಕೆಲವು ಗಂಟೆ ಸಂಚಾರ ಬಂದ್ ಆಗಿತ್ತು. ವಾಹನಗಳು ಅರಿಶಿಣಗೇರಿ ಮಾರ್ಗವಾಗಿ ಸಂಚರಿಸಿದವು.
ತಾಲ್ಲೂಕಿನಲ್ಲಿ ಹಿಂಗಾರು ಗೋವಿನಜೋಳ ಕಟಾವು ಕಾರ್ಯ ಮುಗಿದಿದ್ದು, ರೈತರು ಬೆಳೆಯನ್ನು ಬಯಲು ಪ್ರದೇಶ, ರಾಜ್ಯ ಹೆದ್ದಾರಿ ಮೇಲೆ ಒಣಹಾಕಿದ್ದಾರೆ. ಮಳೆಯಿಂದ ಒಣಹಾಕಿದ್ದ ಗೋವಿನಜೋಳ ಬೆಳೆಗೆ ಹಾನಿಯಾಗಿದೆ. ಮಳೆ ನೀರಿನಿಂದ ರಕ್ಷಿಸಲು ಪ್ಲಾಸ್ಟಿಕ್ ತಾಡಪತ್ರಿ ಮುಚ್ಚಿದ್ದು, ಅದರಲ್ಲಿಯೇ ಗೋವಿನಜೋಳ ಮೊಳಕೆ ಒಡೆಯುವ ಆತಂಕ ಎದುರಾಗಿದೆ.
ಬಂಕಾಪುರ ರಸ್ತೆಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸವಾರರು ಪರದಾಡಿದರು. ರಸ್ತೆ ಪಕ್ಕದ ಮನೆ, ಅಂಗಡಿಗಳಿಗೆ ಮಳೆಯ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.