ADVERTISEMENT

ಕುಮಟಾದಲ್ಲಿ ಮೀನಿನ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 4:49 IST
Last Updated 7 ಆಗಸ್ಟ್ 2025, 4:49 IST
ಕುಮಟಾ ಮೀನು ಧಕ್ಕೆಯ ಬಳಿ ಮೀನು ಕೊಳ್ಳಲು ಸೇರಿದ ಜನರು
ಕುಮಟಾ ಮೀನು ಧಕ್ಕೆಯ ಬಳಿ ಮೀನು ಕೊಳ್ಳಲು ಸೇರಿದ ಜನರು   

ಕುಮಟಾ: ಪಟ್ಟಣದ ಮೀನು ಧಕ್ಕೆಗೆ ಈ ವರ್ಷ ಮೊದಲ ಬಾರಿ ಬುಧವಾರ ವಿವಿಧ ಜಾತಿಯ ಹೇರಳ ಪ್ರಮಾಣದ ಮೀನು ಮಾರಾಟಕ್ಕೆ ಬಂದು ಜನರು ಮೀನು ಖರೀದಿಗೆ ಮುಗಿಬಿದ್ದ ಕಾರಣ ಸಂಚಾರ ದಟ್ಟಣೆ ಉಂಟಾಯಿತು.

ಮೀನುಗಾರಿಕೆ ನಿಷೇಧ ತೆರವುಗೊಂಡು ಆಗಸ್ಟ್‌ 1 ರಿಂದ ಹೆಚ್ಚಿನ ನಾಡದೋಣಿ ಮೀನುಗಾರರು ಸಮುದ್ರಕ್ಕಿಳಿದಿದ್ದರೂ ಆರಂಭದಲ್ಲಿ ಸಣ್ಣ ಗಾತ್ರದ ಬಂಗಡೆ, ರುಚಿಕರ ದೊಡ್ಡ ಜಾಲಿ (ಏಡಿಯ ಇನ್ನೊಂದು ಪ್ರಭೇದ), ದೊಡ್ಡ ಗಾತ್ರದ ಸಿಗಡಿ ಸಿಗುತ್ತಿತ್ತು. ಆದರೆ ಬುಧವಾರ ಸಿಗಡಿ, ಜಾಲಿ ಕಡಿಮೆಯಾಗಿ ದೊಡ್ಡ ಗಾತ್ರದ ಹಸಿರು ಬಣ್ಣದ ಬಂಗಡೆ, ಇಶೋಣ ಮರಿ, ರುಚಿಕರ ಕರಳಗಿ, ಕೆಂಪು ಬಣ್ಣದ ದೋಡಿ, ನೆಪ್ಪೆ, ಬ್ಯಾಟ್ ಮೀನು ಹೇರಳ ಪ್ರಮಾಣದಲ್ಲಿ ಧಕ್ಕೆಗೆ ಬಂದಿದ್ದವು.

ಮೀನು ಮಾರುವ ಮಹಿಳೆಯರು ತಾಜಾ ಮೀನು ದರ ಬಿಟ್ಟುಕೊಡದೇ ಮಾರಾಟಕ್ಕೆ ಯತ್ನಿಸಿದರೆ, ಮೀನು ಪ್ರಿಯರು ₹ 100ಕ್ಕೆ ಜಾಸ್ತಿ ಬಂಗಡೆ ಮೀನು ಸಿಗುವಲ್ಲಿ ಧಾವಿಸುತ್ತಿದ್ದರು. ಇಶೋಣ ಮರಿಗಳು ಜೋಡಿಗೆ ₹ 600, ಕರಳಗಿ ಜೋಡಿಗೆ ₹ 500, ಸಣ್ಣ ಬಂಗಡೆ ₹ 100ಕ್ಕೆ ಆರು, ದೊಡ್ಡದು ಐದು ಮಾರಾಟವಾದವು.

ADVERTISEMENT

‘ಇಷ್ಟು ದಿನ ವ್ಯಾಪಕ ಮಳೆ ಸುರಿದ ಪರಿಣಾಮವಾಗಿ ಮೀನುಗಾರರು ನೀರಿಗಿಳಿಯದಂತೆ ಸಮುದ್ರ ಅಬ್ಬರಿಸುತ್ತಿತ್ತು. ಮೂರು ದಿವಸಗಳಿಂದ ಮಳೆ ಕಡಿಮೆಯಾಗಿ ಮೀನುಗಾರಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗಿದ್ದರಿಂದ ಒಂದೇ ಸಲ ಹೇರಳ ಪ್ರಮಾಣದ ಮೀನುಗಾರಿಕೆ ಸಾಧ್ಯವಾಗಿದೆ’ ಎಂದು ಜಿಲ್ಲಾ ಸಾಂಪ್ರದಾಯಿಕ ಹಾಗೂ ನಾಡದೋಣಿ ಸಂಘದ ಅಧ್ಯಕ್ಷ ಸದಾನಂದ ಹರಿಕಂತ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.