ADVERTISEMENT

ಅಂಕೋಲಾ: ಉದ್ಯೋಗ ಕೊಡಿಸುವುದಾಗಿ ವಂಚನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 15:48 IST
Last Updated 28 ಸೆಪ್ಟೆಂಬರ್ 2022, 15:48 IST

ಕಾರವಾರ: ಕೇಂದ್ರ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ‌ಮುಂಬೈನ ಇಬ್ಬರು, ಅಂಕೋಲಾದ ಕಾಕರಮಠದ ದಂಪ‍ತಿಗೆ ₹ 14.50 ಲಕ್ಷ ವಂಚಿಸಿದ್ದಾರೆ.

ಗೌರೇಶ ಸಂತೋಷ ಬಾಂದೇಕರ್ ಮತ್ತು ಪ್ರೇಮಕುಮಾರ್ ಎನ್.ಸೋಲಂಕಿ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಆರೋಪಿಗಳು ಕಾಕರಮಠದ ನಿವಾಸಿ ವಿಶಾಲ ನಾರ್ವೇಕರ್ ಅವರ ಪತ್ನಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದರು. 2019ರ ನ.8ರಿಂದ 2020ರ ಜುಲೈ 6ರ ಅವಧಿಯಲ್ಲಿ ಹಂತಹಂತವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡಿದ್ದರು. ಆದರೆ, ಉದ್ಯೋಗ ಕೊಡಿಸಿರಲಿಲ್ಲ.

ಹಣವನ್ನು ಪುನಃ ನೀಡುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ಆರೋಪಿಗಳು ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ವಿಶಾಲ ನಾರ್ವೇಕರ್ ಪೊಲೀಸರಿಗೆ ದೂರಿದ್ದಾರೆ.

ADVERTISEMENT

ಗಾಂಜಾ ಸೇವನೆ: ಚಾಲಕ ಬಂಧನ

ಕಾರವಾರ: ಗಾಂಜಾ ಸೇವನೆ ಮಾಡಿದ್ದ ವಾಹನ ಚಾಲಕನೊಬ್ಬನನ್ನು ಅಂಕೋಲಾ ತಾಲ್ಲೂಕಿನ ಬೊಗ್ರಿಬೈಲ್ ಕ್ರಷರ್ ಬಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಅಂಕೋಲಾದ ಹುಲಿದೇವರ ವಾಡಾ ನಿವಾಸಿ ತಬ್ರೇಜ್ ಹಸನ್ ಸಾಬ್ (25) ಬಂಧಿತ ಆರೋಪಿ. ಇನ್‌ಸ್ಪೆಕ್ಟರ್ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಗಾಂಜಾ ಸೇವಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ‍ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಇದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಸೇವನೆ: ವಿದ್ಯಾರ್ಥಿ ಬಂಧನ

ಕಾರವಾರ: ಗಾಂಜಾ ಸೇವಿಸಿದ 20 ವರ್ಷದ ವಿದ್ಯಾರ್ಥಿಯೊಬ್ಬನ್ನು ನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಪಿಯು ಅಂಕೋಲಾ ತಾಲ್ಲೂಕಿನ ಹಿಲ್ಲೂರು ಗ್ರಾಮದ ಪ‍ಡುಗೇರಿಯವನು.

ಕಾರವಾರದ ನಗರಸಭೆ ಕಟ್ಟಡದ ಹಿಂದೆ ಅಮಲಿನಲ್ಲಿದ್ದಾಗ ಇನ್‌ಸ್ಪೆಕ್ಟರ್ ಸಿದ್ದಪ್ಪ ಎಸ್.ಬೀಳಗಿ ನೇತೃತ್ವದಲ್ಲಿ ಪೊಲೀಸರು ವಶಕ್ಕೆ ಪಡೆದರು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿದ್ದು ಖಚಿತವಾಯಿತು. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.