ADVERTISEMENT

ಭಕ್ತಿಯಿಂದ ನೆರವೇರಿದ ಚೌತಿ ಹಬ್ಬ

ಜಿಲ್ಲೆಯಾದ್ಯಂತ ವಿನಾಯಕನ ನಾಮಸ್ಮರಣೆ: ಕೋವಿಡ್ ಆತಂಕದಲ್ಲಿ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 14:29 IST
Last Updated 11 ಸೆಪ್ಟೆಂಬರ್ 2021, 14:29 IST
ಕಾರವಾರದ ಕೋಡಿಬಾಗ್‌ನಲ್ಲಿ ಶನಿವಾರ ಗಣಪತಿ ವಿಗ್ರಹಗಳನ್ನು ವಿಸರ್ಜನೆ ಮಾಡಲಾಯಿತು
ಕಾರವಾರದ ಕೋಡಿಬಾಗ್‌ನಲ್ಲಿ ಶನಿವಾರ ಗಣಪತಿ ವಿಗ್ರಹಗಳನ್ನು ವಿಸರ್ಜನೆ ಮಾಡಲಾಯಿತು   

ಕಾರವಾರ: ಜಿಲ್ಲೆಯಾದ್ಯಂತ ಶುಕ್ರವಾರ ಚೌತಿ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ಅನುಮತಿ ಕೊಟ್ಟ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಸರ್ಕಾರದ ಷರತ್ತಿನ ಪ್ರಕಾರ ವಿಗ್ರಹವನ್ನು ಶನಿವಾರ ವಿಸರ್ಜನೆ ಮಾಡಲಾಯಿತು.

ಈ ವೇಳೆ, ‘ಗಣಪತಿ ಬಪ್ಪಾ ಮೋರಯಾ’, ‘ಮಂಗಲಮೂರ್ತಿ ಮೋರಯಾ’ ಘೋಷಣೆಗಳು ಮೊಳಗಿದವು. ಕೋಡಿಬಾಗ್‌ನಲ್ಲಿ ಕಾಳಿ ನದಿಯ ತಟದಲ್ಲಿ ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸಲು ಅವಕಾಶ ನೀಡಲಾಗಿತ್ತು. ಮನೆಗಳಲ್ಲಿ, ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ್ದ ಲಂಬೋದರನ ಮೂರ್ತಿಗಳನ್ನು ಭಕ್ತರು ಇಲ್ಲಿ ವಿಸರ್ಜನೆ ಮಾಡಿದರು. ಕೆಲವರು ಸಮುದ್ರದ ನೀರಿನಲ್ಲಿ ಕಳುಹಿಸಿಕೊಟ್ಟರು.

ಜಿಲ್ಲೆಯ ವಿವಿಧೆಡೆ ಸುಮಾರು 1,265 ಕಡೆಗಳಲ್ಲಿ ಸರಳವಾಗಿ, ಸಾರ್ವಜನಿಕ ಗಣೇಶೋತ್ಸವ ಆಯೋಜಿಸಲು ಅನುಮತಿ ನೀಡಲಾಗಿತ್ತು. ಕಾರವಾರದ ನಗರದಲ್ಲಿ 23 ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ನಿರಾಕ್ಷೇಪಣಾ ಪತ್ರ ನೀಡಲಾಗಿತ್ತು. ನಾಲ್ಕು ಅಡಿಗಳಿಗಿಂತ ಹೆಚ್ಚು ಎತ್ತರದ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಬಾರದು. ಒಂದೂವರೆ ದಿನದಲ್ಲೇ ವಿಸರ್ಜನೆ ಮಾಡಬೇಕು ಎಂದೂ ನಿಬಂಧನೆ ವಿಧಿಸಲಾಗಿತ್ತು.

ADVERTISEMENT

ಕೋವಿಡ್ ಕಾರಣದಿಂದ ಗಣೇಶೋತ್ಸವಕ್ಕೆ ಅನುಮತಿ ಸಿಗುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಹಾಗಾಗಿ ಹಲವರು ವಿಗ್ರಹಗಳನ್ನು ಮನೆಗೆ ತರುವ ಬಗ್ಗೆ ಗೊಂದಲದಲ್ಲಿದ್ದರು. ಸರ್ಕಾರದ ಷರತ್ತುಬದ್ಧ ಅವಕಾಶ ನೀಡಿದ ಕಾರಣ ಅನೇಕರು ಶುಕ್ರವಾರ ವಿನಾಯಕನ ವಿಗ್ರಹಗಳನ್ನು ಮನೆಗೆ ಬರಮಾಡಿಕೊಂಡರು.

ಫಲಾವಳಿಗಳಿಂದ ದೇವರ ಮಂಟಪವನ್ನು ಅಲಂಕರಿಸಿ, ಮೋದಕ, ಪಂಚಕಜ್ಜಾಯಗಳ ನೈವೇದ‌್ಯ ಅರ್ಪಿಸಿ ಸಂಜೆ ಸಮೀಪದ ಹಳ್ಳ, ಕೆರೆಗಳಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ಸಾಂಪ್ರದಾಯಿಕವಾಗಿ ಭಜನೆ, ಗುಮಟೆ ಪಾಂಗ್‌ ಸೇವೆಗಳನ್ನೂ ಸಲ್ಲಿಸಲಾಯಿತು.

‌ಅಂಕೋಲಾ ತಾಲ್ಲೂಕಿನ ಬೆಳಂಬಾರದಲ್ಲಿ ಭಕ್ತರು ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದ ಗಣಪನ ಮೂರ್ತಿಗಳನ್ನು ಸಮಿಪದ ಸಮುದ್ರ ತೀರದಲ್ಲಿ ಶುಕ್ರವಾರ ವಿಸರ್ಜಿಸಿದರು.

ಸಮುದ್ರ ತಟದಲ್ಲಿ ಮಕ್ಕಳು ಪಟಾಕಿ, ಸುರುಸುರು ಬತ್ತಿಗಳನ್ನು ಹಚ್ಚಿ ಸಂಭ್ರಮಿಸಿದರು. ಮೂರ್ತಿಯನ್ನು ವಿಸರ್ಜಿಸುವಾಗ ಮಕ್ಕಳು ಅದರ ಅಡಿಯಿಂದ ನುಸುಳುವುದು ವಿಶೇಷವಾಗಿತ್ತು. ಸುಮಾರು 15 ಪುಟ್ಟ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.