ADVERTISEMENT

ಮತಗಟ್ಟೆಗೆ ತೆರಳಿದ ಸಿಬ್ಬಂದಿ, ಮತದಾನಕ್ಕೆ ಕ್ಷಣಗಣನೆ

ಮತಗಟ್ಟೆ ಸೇರಿದ ಮತಯಂತ್ರಗಳು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 13:03 IST
Last Updated 22 ಏಪ್ರಿಲ್ 2019, 13:03 IST
ಮತಗಟ್ಟೆ ಸುತ್ತ 200 ಮೀ ಆವರಣದಲ್ಲಿ ಗೆರೆ ಎಳೆಯಲು ಶಿರಸಿಯ ಮಸ್ಟರಿಂಗ್ ಕೇಂದ್ರದಲ್ಲಿ ಸುಣ್ಣಗಳನ್ನು ಪ್ಯಾಕೆಟ್ ಮಾಡಿದ ಸಿಬ್ಬಂದಿ
ಮತಗಟ್ಟೆ ಸುತ್ತ 200 ಮೀ ಆವರಣದಲ್ಲಿ ಗೆರೆ ಎಳೆಯಲು ಶಿರಸಿಯ ಮಸ್ಟರಿಂಗ್ ಕೇಂದ್ರದಲ್ಲಿ ಸುಣ್ಣಗಳನ್ನು ಪ್ಯಾಕೆಟ್ ಮಾಡಿದ ಸಿಬ್ಬಂದಿ   

ಶಿರಸಿ: ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಸೋಮವಾರ ಇವಿಎಂ, ವಿ.ವಿ.ಪ್ಯಾಟ್‌ನೊಂದಿಗೆ ಮತಗಟ್ಟೆಗೆ ತೆರಳಿದರು.

ಹೊರ ತಾಲ್ಲೂಕುಗಳಿಂದ ಬಂದ ಸಿಬ್ಬಂದಿ ಇಲ್ಲಿನ ಮಾರಿಕಾಂಬಾ ಕಾಲೇಜಿನ ಮಸ್ಟರಿಂಗ್ ಸೆಂಟರ್‌ನಲ್ಲಿ ಮತಯಂತ್ರ ಬಳಕೆ ಕುರಿತು ಕೊನೆಯ ಸುತ್ತಿನ ಮಾಹಿತಿ ನೀಡಲಾಯಿತು. ಕ್ಷೇತ್ರದಲ್ಲಿ ಒಟ್ಟು 264 ಮತಗಟ್ಟೆಗಳಿವೆ. 1164 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಚುನಾವಣಾ ಕರ್ತವ್ಯಕ್ಕೆ ತೆರಳುವವರ ಸಲುವಾಗಿ 26 ಬಸ್, 24 ಟೆಂಪೊ, 13 ಜೀಪ್‌ಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಸೇರಿ ನಾಲ್ವರು ಕರ್ತವ್ಯ ನಿರ್ವಹಿಸಲಿದ್ದಾರೆ. ಏ.23ರ ಬೆಳಿಗ್ಗೆ 6 ಗಂಟೆಗೆ ಎಲ್ಲ ಮತಗಟ್ಟೆಗಳಲ್ಲಿ ಅಣಕು ಮತದಾನ ನಡೆಯಲಿದೆ. ನಂತರ 7 ಗಂಟೆಗೆ ಆರಂಭವಾಗುವ ಮತದಾನವು ಸಂಜೆ 6 ಗಂಟೆಯವರೆಗೆ ನಡೆಯುತ್ತದೆ. ಅರೆಸೇನಾ ಪಡೆ, ಪೊಲೀಸ್, ಗೃಹ ರಕ್ಷಕ ದಳದ ಸಿಬ್ಬಂದಿ ಮತಗಟ್ಟೆ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ADVERTISEMENT

‘ಕ್ಷೇತ್ರದಲ್ಲಿ 35 ಸೂಕ್ಷ ಹಾಗೂ ಒಂಬತ್ತು ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. 28 ಕಡೆಗಳಲ್ಲಿ ವಿಶೇಷ ವೀಕ್ಷಕರು ನಿಯೋಜನೆಗೊಂಡಿದ್ದಾರೆ. ಮತಗಟ್ಟೆ ಸಿಬ್ಬಂದಿಗೆ ಅಕ್ಷರ ದಾಸೋಹದ ಮೂಲಕ ಮಧ್ಯಾಹ್ನದ ಊಟ ಪೂರೈಸಲಾಗುತ್ತದೆ. ಮತದಾನ ಶಾಂತಿಯುತವಾಗಿ ನಡೆಯಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

‘ಚಿಕ್ಕ ಮಕ್ಕಳಿರುವ ತಾಯಂದಿರಿಗೆ ಚುನಾವಣಾ ಕರ್ತವ್ಯಕ್ಕೆ ವಿನಾಯಿತಿ ನೀಡಬೇಕಾಗಿತ್ತು. ಏಳು ತಿಂಗಳ ಮಗುವನ್ನು ಕರೆದುಕೊಂಡು ಮತಗಟ್ಟೆಗೆ ಹೋಗಬೇಕಾಗಿದೆ’ ಎಂದು ಮಹಿಳೆಯೊಬ್ಬರು ಅಲವತ್ತುಕೊಂಡರು. ಚಿಕ್ಕ ಮಕ್ಕಳಿರುವ ತಾಯಂದಿರಿಬ್ಬರು ಹಿರಿಯ ಅಧಿಕಾರಿಗಳ ಬಳಿ ಹೋಗಿ ವಿನಾಯಿತಿ ನೀಡುವಂತೆ ವಿನಂತಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಮನೆ–ಮನೆ ಪ್ರಚಾರ:

ಭಾನುವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದರಿಂದ ಸೋಮವಾರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮನೆ–ಮನೆಗೆ ತೆರಳಿ ಮತ ಹಾಕುವಂತೆ ವಿನಂತಿಸಿದರು. ಆದರೂ, ಪ್ರತಿ ಚುನಾವಣೆಗಳಂತೆ ಗ್ರಾಮೀಣ ಭಾಗದಲ್ಲಿ ಈ ಬಾರಿ ಪ್ರಚಾರದ ತುರುಸು ಕಂಡುಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.