ಕಾರವಾರ: ‘ಹಾಲಕ್ಕಿ ಒಕ್ಕಲಿಗರು, ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರದಿಂದ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವ ಸಲ್ಲಿಕೆಯಾಗಲಿದೆ’ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
‘ಜಿಲ್ಲೆಯಲ್ಲಿರುವ, ಸಾಮಾಜಿಕವಾಗಿ ಹಿಂದುಳಿದ ಎರಡೂ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹಲವು ವರ್ಷದಿಂದ ಪ್ರಯತ್ನಿಸಿದೆ. ಆದರೆ, ಪ್ರಯತ್ನ ಕೈಗೂಡಲಿಲ್ಲ. ಈಚೆಗಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಪುನಃ ಇದೇ ವಿಚಾರವಾಗಿ ಚರ್ಚಿಸಿದ್ದೇನೆ. ಮರು ಪ್ರಸ್ತಾವ ಸಲ್ಲಿಕೆಸುವ ಭರವಸೆ ನೀಡಿದ್ದಾರೆ’ ಎಂದು ಇಲ್ಲಿ ಶುಕ್ರವಾರ ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು.
‘ಸಚಿವ ಸಂಪುಟ ಪುನರ್ ರಚನೆ, ವಿಸ್ತರಣೆ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ನಿರ್ಧಾರ. ಅವರು ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಾಗಿರುತ್ತೇವೆ. ನನಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ಪಾಠ ಕಲಿಸಿದ ಭಾರತೀಯ ಯೋಧರ ಕರ್ತವ್ಯವು ಶ್ಲಾಘನೆಗೆ ಅರ್ಹವಾಗಿದೆ. ಸೇನೆಯ ಬಗ್ಗೆ ದೇಶದ ಪ್ರತಿ ಪ್ರಜೆಗೆ ಗೌರವ ಇರಬೇಕು. ಪಾಕಿಸ್ತಾನಕ್ಕೆ ಸೋತ ಹತಾಶೆ ಇದೆ. ಭಯೋತ್ಪಾದನೆ ಉತ್ತೇಜಿಸುವ ದೇಶಕ್ಕೆ ಇದು ತಕ್ಕ ಪಾಠವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.