ಕಾರವಾರ: ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಬಿರುಸಿನ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.
ನಗರವೂ ಸೇರಿದಂತೆ ವಿವಿಧೆಡೆ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದ ಕಾರಣ ಮಾರುಕಟ್ಟೆಯಲ್ಲಿ ಮಂಗಳವಾರ ಜನರ ಓಡಾಟ ಕಡಿಮೆ ಇತ್ತು. ದಿನವಿಡೀ ಜಿಲ್ಲೆಯಾದ್ಯಂತ ದಟ್ಟ ಮೋಡ ಕವಿದ ವಾತಾವರಣವಿತ್ತು. ಮಳೆಯ ವಾತಾವರಣ ಮುಂಗಾರು ಹಂಗಾಮಿಗೆ ಸಿದ್ಧತೆ ಮಾಡಿಕೊಳ್ಳಲು ಜನರನ್ನು ಎಚ್ಚರಿಸಿತು.
ಇಲ್ಲಿನ ಕಮಲಾಕರ ರಸ್ತೆ, ಗ್ರೀನ್ ಸ್ಟ್ರೀಟ್ ಸೇರಿದಂತೆ ಹಲವೆಡೆ ಮರದ ಟೊಂಗೆಗಳು ರಸ್ತೆಗೆ ಬಿದ್ದು ಕೆಲ ನಿಮಿಷ ಸಂಚಾರಕ್ಕೆ ಅಡ್ಡಿಯುಂಟು ಮಾಡಿದವು. ನಗರಸಭೆ ಸಿಬ್ಬಂದಿ ತಕ್ಷಣ ಅವುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಚರಂಡಿಗಳ ಹೂಳೆತ್ತುವ ಕೆಲಸ ಪೂರ್ಣಗೊಳ್ಳದ ಪರಿಣಾಮ ಹಲವೆಡೆ ಜನವಸತಿ ಪ್ರದೇಶಗಳಲ್ಲಿ ರಸ್ತೆಗಳ ಮೇಲೆ ನೀರು ನಿಲ್ಲುವಂತಾಯಿತು.
ನಗರದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ಕೆಳಭಾಗದಲ್ಲಿ ಕಾಂಕ್ರೀಟ್ ಕಟ್ಟೆ ನಿರ್ಮಿಸಿರುವ ಪರಿಣಾಮದಿಂದ ನೀರು ಸರಾಗವಾಗಿ ಹರಿಯಲಾಗದೆ ಜಲಾವೃತವಾಯಿತು. ಹೆದ್ದಾರಿಯ ಸರ್ವೀಸ್ ರಸ್ತೆಯ ಮೇಲೆ ಕೆಸರು ಮಿಶ್ರಿತ ನೀರು ಹರಿದಿದ್ದರಿಂದ ರಸ್ತೆಯನ್ನು ಶುಚಿಗೊಳಿಸುವ ಕಾರ್ಯದಲ್ಲಿ ಹೆದ್ದಾರಿ ಪ್ರಾಧಿಕಾರ ನಿಯೋಜಿಸಿದ ಸಿಬ್ಬಂದಿ ತೊಡಗಿಕೊಂಡಿದ್ದರು.
ಮೇ 23ರವರೆಗೂ ರೆಡ್ ಅಲರ್ಟ್
ಜಿಲ್ಲೆಯಾದ್ಯಂತ ಮೇ 23ರವರೆಗೂ ಗಾಳಿ ಸಹಿತ ರಭಸದ ಮಳೆ ಸುರಿಯಲಿದ್ದು, ಮುಂದಿನ ಮೂರು ದಿನ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆಯೂ ಎಚ್ಚರಿಸಲಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಬೆನ್ನಲ್ಲೇ ಸೋಮವಾರ ಸಂಜೆಯಿಂದಲೇ ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಬಂದರಿಗೆ ತಲುಪಿವೆ. ನೆರೆಯ ಮಲ್ಪೆ, ಮಂಗಳೂರಿನ ಮೀನುಗಾರಿಕೆ ದೋಣಿಗಳು ಬೈತಕೋಲ ಬಳಿ ಲಂಗರು ಹಾಕಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.