ADVERTISEMENT

ಹುಬ್ಬಳ್ಳಿ–ಅಂಕೋಲಾ ರೈಲ್ವೆ ಮಾರ್ಗ: ಮತ್ತೆ ಕಮರಿದ ದಶಕದ ಕನಸು

ಸಂಧ್ಯಾ ಹೆಗಡೆ
Published 10 ಮಾರ್ಚ್ 2020, 19:30 IST
Last Updated 10 ಮಾರ್ಚ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿರಸಿ: ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರದ ನಡುವೆ ಹಾದು ಹೋಗುವ ಪ್ರಸ್ತಾವಿತ ಹುಬ್ಬಳ್ಳಿ–ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಅನುಮತಿ ನಿರಾಕರಿಸಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿ–ಅಂಕೋಲಾ ರೈಲ್ವೆ ಹೋರಾಟ ಕ್ರಿಯಾಸಮಿತಿ ಈ ನಿಲುವನ್ನು ತೀವ್ರವಾಗಿ ವಿರೋಧಿಸಿದ್ದರೆ, ಪರಿಸರವಾದಿ ಪಾಂಡುರಂಗ ಹೆಗಡೆ ವನ್ಯಜೀವಿ ಮಂಡಳಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

‘ವ್ಯಾಪಾರ ವಹಿವಾಟು ವೃದ್ಧಿಗೆ ಅನುಕೂಲವಾಗುವ ಹುಬ್ಬಳ್ಳಿ–ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣವನ್ನು ಜಿಲ್ಲೆಯ ಜನರು ದಶಕಗಳಿಂದ ನಿರೀಕ್ಷಿಸುತ್ತಿದ್ದಾರೆ. ಆದರೆ, ವನ್ಯಜೀವಿ ಮಂಡಳಿ ಈ ಪ್ರಸ್ತಾಪವನ್ನು ತಿರಸ್ಕರಿಸಲು ಯಾವುದೇ ಬಲವಾದ ಕಾರಣಗಳಿಲ್ಲ. 25 ವರ್ಷಗಳ ಹಿಂದಿನ ವರದಿ ಆಧರಿಸಿ, ಮಂಡಳಿ ಪೂರ್ವಗ್ರಹಪೀಡತವಾಗಿ ಪ್ರಸ್ತಾಪವನ್ನು ತಿರಸ್ಕರಿಸಿದೆ. ಮತ್ತೊಮ್ಮೆ ನಿಯೋಗದಲ್ಲಿ ಹೋಗಿ, ಕೇಂದ್ರ ಸಚಿವರಾದ ಸುರೇಶ ಅಂಗಡಿ, ಪ್ರಹ್ಲಾದ ಜೋಶಿ ಅವರನ್ನು ವಿನಂತಿಸಲಾಗುವುದು’ ಎಂದು ಹುಬ್ಬಳ್ಳಿ–ಅಂಕೋಲಾ ರೈಲ್ವೆ ಹೋರಾಟ ಕ್ರಿಯಾಸಮಿತಿ ಕಾರ್ಯದರ್ಶಿ ವಿಠ್ಠಲದಾಸ ಕಾಮತ ಪ್ರತಿಕ್ರಿಯಿಸಿದರು.

ವಿಜ್ಞಾನಿಗಳಾದ ಡಾ.ಟಿ.ವಿ.ರಾಮಚಂದ್ರ, ಸುಭಾಸ್‌ಚಂದ್ರನ್ ನೇತೃತ್ವದಲ್ಲಿ ಸರ್ಕಾರ ನೇಮಿಸಿರುವ ಸಮಿತಿ ಈ ರೈಲ್ವೆ ಮಾರ್ಗದ ಸಂಬಂಧ ವಿವರ ವರದಿ ನೀಡಿದೆ. ಪರಿಷ್ಕೃತ ಯೋಜನೆಯಡಿ ಪರಿಸರ ನಾಶವಾಗುವ ಪ್ರಮಾಣವೂ ಕಡಿಮೆಯಿದೆ. ಯಾವುದೇ ಮರದ ಬೇರು ಐದು ಮೀಟರ್ ಕೆಳಗೆ ಹೋಗುವುದಿಲ್ಲ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಐದು ಮೀಟರ್ ಕೆಳಗೆ ಟನಲ್‌ ಮೂಲಕ ಮಾರ್ಗ ನಿರ್ಮಿಸಬಹುದು. ಈ ವಿಚಾರವನ್ನು ಸರ್ಕಾರ ಪುನರ್ ಪರಿಶೀಲಿಸಬೇಕು ಎಂದು ಸಲಹೆ ಮಾಡಿದರು.

ADVERTISEMENT

ಸ್ವಾಗತಾರ್ಹ ಕ್ರಮ

ವನ್ಯಜೀವಿ ಮಂಡಳಿಯ ನಿರ್ಧಾರ ಸ್ವಾಗತಾರ್ಹ ಕ್ರಮ. ಇದೇ ನಿಲುವನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಈ ಸಮಸ್ಯೆಗೊಂದು ಪೂರ್ಣವಿರಾಮ ಬೀಳಬೇಕು. ಜಾಗತಿಕ ಹವಾಮಾನ ಪರಿಸ್ಥಿತಿಯಲ್ಲಿ ಇಂತಹ ನೈಸರ್ಗಿಕ ಅರಣ್ಯ ರಕ್ಷಿಸದಿದ್ದಲ್ಲಿ ಪರಿಸರದ ಮೇಲೆ ದುಷ್ಪರಿಣಾಮ ಹೆಚ್ಚಾಗುತ್ತದೆ. ಕಾಳಿ ಕೊಳ್ಳದ ಅಮೂಲ್ಯ ಸಸ್ಯಸಂಪತ್ತು ಈ ಯೋಜನೆಯಿಂದ ನಾಶವಾಗುತ್ತದೆ. ಯೋಜನೆ ಅನುಷ್ಠಾನಗೊಂಡರೆ, ನಾಶವಾಗುವ ಎರಡು ಲಕ್ಷ ಮರಗಳನ್ನು ಮತ್ತೆ ನೆಟ್ಟು ಬೆಳೆಸಲು ಸಾಧ್ಯವಿಲ್ಲ. ಇದನ್ನು ಹೋರಾಟಗಾರರು ಅರಿತುಕೊಳ್ಳಬೇಕು ಎಂದು ಪಾಂಡುರಂಗ ಹೆಗಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ರೈಲ್ವೆ ಮಾರ್ಗದ ಹಿನ್ನೆಲೆ

ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಅಂಕೋಲಾ ನಡುವೆ ಸಂಪರ್ಕ ಕಲ್ಪಿಸುವ 163 ಕಿ.ಮೀ ಉದ್ದದ ರೈಲ್ವೆ ಮಾರ್ಗ ಯೋಜನೆಗೆ ದೀರ್ಘ ಇತಿಹಾಸವಿದೆ. ಬ್ರಿಟಿಷರ ಆಳ್ವಿಕೆಯ ಕಾಲದಿಂದಲೂ ಪ್ರಸ್ತಾಪವಿದ್ದ ಈ ಮಾರ್ಗ ನಿರ್ಮಾಣಕ್ಕೆ, ಸ್ವಾತಂತ್ರ್ಯಾನಂತರ ನಿರಂತರ ಹೋರಾಟ ನಡೆಯುತ್ತಲೇ ಇದೆ. 1990ರಲ್ಲಿ ಈ ಯೋಜನೆ ಜಾರಿಗೆ ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿದರೂ, ಕೇಂದ್ರ ಪರಿಸರ ಸಚಿವಾಲಯ, ಇದರ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿತು.

ಆರಂಭಿಕ ಯೋಜನೆಯ ಪ್ರಕಾರ 965 ಹೆಕ್ಟೇರ್ ಅರಣ್ಯ ನಾಶವಾಗಬಹುದೆಂದು ಅಂದಾಜಿಸಲಾಗಿತ್ತು. ಪರಿಸರ ಸಚಿವಾಲಯದ ಅನುಮತಿ ನಿರಾಕರಣೆಯ ನಂತರ ಸಿದ್ಧಪಡಿಸಿದ ಪರಿಷ್ಕೃತ ವರದಿಯಲ್ಲಿ ಈ ಪ್ರಮಾಣ 720 ಹೆಕ್ಟೇರ್‌ಗೆ ಇಳಿಕೆಯಾಯಿತು. ಈ ನಡುವೆ ಶಿರಸಿಯ ಪರಿಸರ ಸಂರಕ್ಷಣಾ ಕೇಂದ್ರ ಹಾಗೂ ಬೆಂಗಳೂರಿನ ಎನ್‌ಜಿಒವೊಂದು ಜಂಟಿಯಾಗಿ ಸುಪ್ರೀಂ ಕೋರ್ಟ್‌ನ ಹಸಿರು ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದವು. ಇದು ವಿಚಾರಣೆಯ ಹಂತದಲ್ಲಿದೆ.

ಹುಬ್ಬಳ್ಳಿಯಿಂದ ಕಲಘಟಗಿವರೆಗೆ ಅರಣ್ಯೇತರ ಪ್ರದೇಶದಲ್ಲಿ 45 ಕಿ.ಮೀ ರೈಲ್ವೆ ಹಳಿ ಮಾರ್ಗ ನಿರ್ಮಾಣವಾಗಿದೆ. ಇದಕ್ಕೆ ಅಂದಾಜು ₹ 300 ಕೋಟಿ ವೆಚ್ಚವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.