ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ಸ್ಯ– ಸಂಜೀವಿನಿ ಯೋಜನೆ ಜಾರಿ: ಸಚಿವ ಮಂಕಾಳ ವೈದ್ಯ

​ಪ್ರಜಾವಾಣಿ ವಾರ್ತೆ
Published 4 ಮೇ 2025, 14:13 IST
Last Updated 4 ಮೇ 2025, 14:13 IST
ಭಟ್ಕಳದ ಅಳ್ವೇಕೋಡಿಯಲ್ಲಿ ನಡೆದ ಜಲಶ್ರೀ ಮತ್ಸ್ಯ– ಸಂಜೀವಿನಿ ಕಂಪನಿಯ ಪ್ರಥಮ ವರ್ಷದ ವಾರ್ಷಿಕ ಸಮ್ಮೇಳವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು
ಭಟ್ಕಳದ ಅಳ್ವೇಕೋಡಿಯಲ್ಲಿ ನಡೆದ ಜಲಶ್ರೀ ಮತ್ಸ್ಯ– ಸಂಜೀವಿನಿ ಕಂಪನಿಯ ಪ್ರಥಮ ವರ್ಷದ ವಾರ್ಷಿಕ ಸಮ್ಮೇಳವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು   

ಭಟ್ಕಳ: ‘ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರ ಮಹಿಳೆಯರ ಉತ್ಪಾದಕ ಕಂಪನಿ ರಚಿಸುವ ಮೂಲಕ ಮೀನುಗಾರಿಕೆ ಮೌಲ್ಯ ಸರಪಳಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮತ್ಸ್ಯ -ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದೊಂದು ನವೀನ ಮತ್ತು ಪ್ರಭಾವಶಾಲಿ ಮತ್ಸ್ಯ ಸಾಕಾಣಿಕೆ ಆಧಾರಿತ ಯೋಜನೆಯಾಗಿದೆ’ ಎಂದು ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ಭಟ್ಕಳದ ಅಳಿವೆಕೋಡಿ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಶನಿವಾರ ನಡೆದ ಜಲಶ್ರೀ  ಮತ್ಸ್ಯ–  ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯುಸರ್ ಕಂಪನಿ ನಿಯಮಿತದ ಪ್ರಥಮ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

‘ಮೊದಲ ಬಾರಿಗೆ ಮೀನುಗಾರ ಮಹಿಳೆಯರ ಉತ್ಪಾದಕರ ಕಂಪನಿ ರಚಿಸುವ ಮೂಲಕ ತಾಜಾ ಮತ್ತು ಒಣ ಮೀನಿನ ಸಂಗ್ರಹಣೆ, ಪ್ರಾಥಮಿಕ ಸಂಸ್ಕರಣೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ ಮತ್ತು ಮಾರುಕಟ್ಟೆ ಜೋಡಣೆ, ಜಲಕೃಷಿ ಪ್ರವಾಸೋದ್ಯಮ ಮತ್ತು ಬೈವಾಲ್ಡ್ಗಳ ಕೃಷಿ (ಮಸ್ಸೆಲ್ಸ್ ಸಿಂಪಿ), ಕಡಲಕಳೆ ಕೃಷಿ, ಪಂಜರ ಕೃಷಿ ಮತ್ತು ಹಿತ್ತಲ ಅಲಂಕಾರಿಕ ಮೀನು ಸಾಕಣೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ’ ಎಂದರು.

ADVERTISEMENT

’ಉತ್ತರ ಕನ್ನಡ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ತಾಜಾ ಮೀನು ಸಂಗ್ರಹಣಾ ಕೇಂದ್ರಗಳು, ಶೈತ್ಯಾಗಾರ ಘಟಕಗಳು, ಆಧುನಿಕ ಮೀನು ಒಣಗಿಸುವ ಘಟಕಗಳು, ಮೀನುಗಾರ ಮಹಿಳೆಯರ ಉತ್ಪಾದಕರ ಕಂಪನಿಯ ಕಚೇರಿ, ಮಂಜುಗಡ್ಡೆ ಉತ್ಪಾದನಾ ಘಟಕಗಳು, ಜಲಕೃಷಿ ಪ್ರವಾಸೋದ್ಯಮದ ಚಟುವಟಿಕೆಗಳು ಮತ್ತು ತೂಕದ ಯಂತ್ರಗಳಿಗೆ ಭೂಮಿ/ಸೈಟ್‌ಗಳನ್ನು ಗುರುತಿಸುವ ಅವಶ್ಯಕತೆಯಿದೆ. ಈ ಮೂಲ ಸಮೀಕ್ಷೆ ಕೈಗೊಳ್ಳಲು ಆಯಾ ತಾಲ್ಲೂಕಿನ ಆಯ್ದ ಗ್ರಾಮ ಪಂಚಾಯಿತಿ ಒಕ್ಕೂಟದ ಕೃಷಿ ಸಖಿ ಮತ್ತು ಪಶು ಸಖಿಯರ ಮೂಲಕ ಮೂಲ ಸಮೀಕ್ಷೆ ಕೈಗೊಳ್ಳಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

ಶಿರಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ದೈಮನೆ, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ, ಅಭಿಯಾನ ನಿರ್ದೇಶಕ ಅರ್ಜುನ್ ಒಡೇಯರ್, ಯೋಜನ ನಿರ್ದೇಶಕ ಕರೀಮ್ ಅಸಾದಿ, ತಾಲ್ಲೂಕು ಪಂಚಾಯಿತಿ ಇಒವೆಂಕಟೇಶ ನಾಯಕ, ಸ್ಥಳೀಯ ಮೀನುಗಾರ ಮುಖಂಡ ರಾಮಾ ಮೊಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.