ADVERTISEMENT

ಕಾರವಾರ: ಸಮುದ್ರ ಅಧ್ಯಯನಕ್ಕೆ ಸುಧಾರಿತ ‘ಬಾಯ್’

₹ 75 ಲಕ್ಷ ವೆಚ್ಚದ ಅತ್ಯಾಧುನಿಕ ಉಪಕರಣ ಬಿಗಿಯಲಿದೆ ₹ 1.50 ಲಕ್ಷದ ವಿಶೇಷ ಹಗ್ಗ

ಸದಾಶಿವ ಎಂ.ಎಸ್‌.
Published 3 ಸೆಪ್ಟೆಂಬರ್ 2020, 19:30 IST
Last Updated 3 ಸೆಪ್ಟೆಂಬರ್ 2020, 19:30 IST
ಕಾರವಾರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರಕ್ಕೆ ತರಲಾಗಿರುವ ಸುಧಾರಿತ ‘ಸಾಗರ ಹವಾಮಾನ ಮುನ್ಸೂಚನಾ ಉಪಕರಣ’
ಕಾರವಾರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರಕ್ಕೆ ತರಲಾಗಿರುವ ಸುಧಾರಿತ ‘ಸಾಗರ ಹವಾಮಾನ ಮುನ್ಸೂಚನಾ ಉಪಕರಣ’   

ಕಾರವಾರ: ಅಲೆಗಳು ಹಾಗೂ ಗಾಳಿಯ ಸಂಪೂರ್ಣ ಮಾಹಿತಿ ನೀಡುವ, ಸುಧಾರಿತ ‘ಸಾಗರ ಹವಾಮಾನ ಮುನ್ಸೂಚನಾ ಉಪಕರಣ’ವು (ವೇವ್ ರೈಡರ್ ಬಾಯ್) ಟ್ಯಾಗೋರ್ ಕಡಲತೀರದ ಸಮೀಪದಲ್ಲಿ ಶೀಘ್ರವೇ ಸ್ಥಾಪನೆಯಾಗಲಿದೆ.

ನೆದರ್‌ಲ್ಯಾಂಡ್‌ನಲ್ಲಿ ತಯಾರಾಗಿರುವ, ₹ 75 ಲಕ್ಷ ಮೌಲ್ಯದ ಈ ಅತ್ಯಾಧುನಿಕ ಉಪಕರಣವನ್ನು ನಗರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರಕ್ಕೆ ತರಲಾಗಿದೆ. ಹೈದರಾಬಾದ್‌ನಲ್ಲಿರುವ ಸಮುದ್ರ ಮಾಹಿತಿ ಮತ್ತು ಸೇವೆಗಳ ರಾಷ್ಟ್ರೀಯ ಕೇಂದ್ರ, ‘ಇನ್‌ಕಾಯ್ಸ್’ (ಐ.ಎನ್.ಸಿ.ಒ.ಐ.ಎಸ್) ಉಪಕರಣವನ್ನು ಮಂಜೂರು ಮಾಡಿ ಕಳುಹಿಸಿಕೊಟ್ಟಿದೆ. ‘ಇನ್‌ಕಾಯ್ಸ್’ ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದೆ.

‘ಸಮುದ್ರದಲ್ಲಿ ಏಳುವ ಅಲೆಗಳ ಎತ್ತರ, ಅಲೆಗಳ ದಿಕ್ಕು, ಅಲೆಗಳ ಅವಧಿ, ಅವುಗಳು ಅಪ್ಪಳಿಸುವ ವೇಗ, ಸಮುದ್ರದ ನೀರಿನ ಉಷ್ಣಾಂಶ, ಗಾಳಿಯ ಉಷ್ಣಾಂಶ ಮುಂತಾದ ಅಂಶಗಳನ್ನು ಈ ಉಪಕರಣ ನಿರಂತರವಾಗಿ ದಾಖಲಿಸುತ್ತದೆ. ಇದು ಇನ್ಸಾಟ್ ಸರಣಿಯ ಓಷಿಯನ್ ಸ್ಯಾಟ್ ಉಪಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತದೆ. ಉಪಗ್ರಹದಿಂದ ಹೈದರಾಬಾದ್‌ನಲ್ಲಿರುವ ‘ಇನ್‌ಕಾಯ್ಸ್’ ಕಚೇರಿಗೆ ಮಾಹಿತಿ ರವಾನೆಯಾಗುತ್ತದೆ. ಸಮುದ್ರದ ಸ್ಥಿತಿಗತಿಯ ಅಧ್ಯಯನಕ್ಕೆ ಇದು ಸಹಕಾರಿಯಾಗಲಿದೆ’ ಎಂದು ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಜಗನ್ನಾಥ ರಾಥೋಡ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಹಳೆಯದು ಭಟ್ಕಳದಲ್ಲಿ ಸ್ಥಾಪನೆ: ‘ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸಮೀಪದಲ್ಲಿರುವ ಲೈಟ್‌ಹೌಸ್ ಬಳಿ ಈಗಾಗಲೇ ಒಂದು ವೇವ್ ರೈಡರ್ ಬಾಯ್ ಕಾರ್ಯ ನಿರ್ವಹಿಸುತ್ತಿದೆ. ಅದನ್ನು ಭಟ್ಕಳ ಭಾಗದಲ್ಲಿ ಅಳವಡಿಸಲಾಗುವುದು. ಹೊಸ ಉಪಕರಣವು ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿದೆ’ ಎಂದು ತಿಳಿಸಿದರು.

‘ಬಾಯ್‌ಗೆ ಥಾಯ್ಲೆಂಡ್‌ನಿಂದ ತರಿಸಲಾಗಿರುವ ಸುಮಾರು ₹ 1.50 ಲಕ್ಷ ಮೌಲ್ಯದ ವಿಶೇಷ ಹಗ್ಗದಿಂದ ಬಿಗಿಯಲಾಗುತ್ತದೆ. ಅದನ್ನು 400 ಕೆ.ಜಿ ತೂಕದ ವೇದಿಕೆಗೆ ಜೋಡಿಸಿ ಸಮುದ್ರಕ್ಕೆ ಇಳಿಬಿಡಲಾಗುತ್ತದೆ. ಸಮುದ್ರದ ವರ್ತನೆಯ ಬಗ್ಗೆ ಮೀನುಗಾರರಿಗೆ, ಕಡಲತೀರದ ನಿವಾಸಿಗಳಿಗೆ ಮುನ್ಸೂಚನೆ ನೀಡಲು ಸುಧಾರಿತ ಸಾಗರ ಹವಾಮಾನ ಮುನ್ಸೂಚನಾ ಉಪಕರಣವು ಸಹಕಾರಿಯಾಗಲಿದೆ‌’ ಎಂದು ಅವರು ಹೇಳಿದರು.

ಈ ಉಪಕರಣವು ನೀಡುವ ಮಾಹಿತಿಗಳ ಅಧ್ಯಯನಕ್ಕೆ ಡಾ.ರಾಥೋಡ್ ಪ್ರಧಾನ ಸಂಶೋಧಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಗೋವಾದಲ್ಲಿರುವ ಸಮುದ್ರ ವಿಜ್ಞಾನದ ರಾಷ್ಟ್ರೀಯ ಸಂಸ್ಥೆಯು (ಎನ್.ಐ.ಒ) ಉಪಕರಣದ ಬಳಕೆಗೆ ತಾಂತ್ರಿಕ ನೆರವು ನೀಡಿದ್ದು, ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರವು ನಿರ್ವಹಣೆ ಮಾಡಲಿದೆ.

ಒಂಬತ್ತು ರಾಜ್ಯಗಳಿಗೆ ಮಂಜೂರು:

‘ಸುಧಾರಿತ ಸಾಗರ ಹವಾಮಾನ ಮುನ್ಸೂಚನಾ ಉಪಕರಣ’ವು ಹೆಚ್ಚಿನ ಸಾಮರ್ಥ್ಯವುಳ್ಳ (ಎಚ್.ಎಫ್) ಆ್ಯಂಟೆನಾ ಹೊಂದಿದೆ. ಉಪಕರಣವನ್ನು ಸಮುದ್ರಕ್ಕೆ ಬಿಟ್ಟ ಬಳಿಕ ಸುಮಾರು 50 ಮೀಟರ್‌ ಸುತ್ತಳತೆಯಲ್ಲೇ ಅದು ತೇಲುತ್ತಿರುತ್ತದೆ. ಈ ರೀತಿಯ ಉಪಕರಣವನ್ನು ಸಮುದ್ರ ತೀರ ಹೊಂದಿರುವ ಕರ್ನಾಟಕವೂ ಸೇರಿದಂತೆ ಒಂಬತ್ತು ರಾಜ್ಯಗಳಿಗೆ ನೀಡಲಾಗಿದೆ’ ಎಂದು ಡಾ.ಜಗನ್ನಾಥ ರಾಥೋಡ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.