ADVERTISEMENT

ಕಠಿಣ ಸ್ಥಿತಿ ಕನಸಿನಲ್ಲೂ ಊಹಿಸಿರಲಿಲ್ಲ

ಬನವಾಸಿಗೆ ತಲುಪಿದ ಇಮ್ರಾನ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 4:46 IST
Last Updated 6 ಮಾರ್ಚ್ 2022, 4:46 IST
ಉಕ್ರೇನ್‍ನಲ್ಲಿ ಸಿಲುಕಿದ್ದ ಇಮ್ರಾನ್ ನಜಿರ್ ಚೌದರಿ ಸುರಕ್ಷಿತವಾಗಿ ಸ್ವಗ್ರಾಮ ಬನವಾಸಿಗೆ ಶನಿವಾರ ಮರಳಿದ್ದು ಉಪವಿಭಾಗಾಧಿಕಾರಿ ದೇವರಾಜ ಆರ್. ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಇಮ್ರಾನ್ ತಂದೆ ಅಲ್ತಾಫ್ ಚೌದರಿ, ಕುಟುಂಬ ಸದಸ್ಯರು ಇದ್ದರು
ಉಕ್ರೇನ್‍ನಲ್ಲಿ ಸಿಲುಕಿದ್ದ ಇಮ್ರಾನ್ ನಜಿರ್ ಚೌದರಿ ಸುರಕ್ಷಿತವಾಗಿ ಸ್ವಗ್ರಾಮ ಬನವಾಸಿಗೆ ಶನಿವಾರ ಮರಳಿದ್ದು ಉಪವಿಭಾಗಾಧಿಕಾರಿ ದೇವರಾಜ ಆರ್. ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಇಮ್ರಾನ್ ತಂದೆ ಅಲ್ತಾಫ್ ಚೌದರಿ, ಕುಟುಂಬ ಸದಸ್ಯರು ಇದ್ದರು   

ಶಿರಸಿ: ‘ಜೀವನದಲ್ಲಿ ಯುದ್ಧದಂತಹ ಸನ್ನಿವೇಶವನ್ನು ಬಹಳ ಹತ್ತಿರದಿಂದ ನೋಡುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಕೇಂದ್ರ ಸರ್ಕಾರದ ಸಹಾಯದಿಂದ ಅಪಾಯದಿಂದ ಪಾರಾಗಿ ಬಂದೆ’ ಎಂದು ಬನವಾಸಿಯ ಯುವಕ ಇಮ್ರಾನ್ ನಜಿರ್ ಚೌದರಿ ಹೇಳಿದರು.

ಯುದ್ಧಪೀಡಿತ ಉಕ್ರೇನ್ ನೆಲದಿಂದ ಸುರಕ್ಷಿತವಾಗಿ ಸ್ವಗ್ರಾಮಕ್ಕೆ ಶನಿವಾರ ಮರಳಿದ ಅವರನ್ನು ತಂದೆ ಅಲ್ತಾಫ್ ಮತ್ತು ಕುಟುಂಬದವರು ಸಂತಸದಿಂದ ಬರಮಾಡಿಕೊಂಡರು. ಭೀಕರ ಯುದ್ಧ ಸನ್ನಿವೇಶವನ್ನು ದಿನವೀಡಿ ಟಿವಿ ಮೂಲಕ ವೀಕ್ಷಿಸುತ್ತಿದ್ದ ತಂದೆ, ತಾಯಿ ಮಗ ಅದೇ ನೆಲದಿಂದ ಅಪಾಯವಿಲ್ಲದೆ ಬಂದಿದ್ದನ್ನು ಕಂಡು ಭಾವುಕರಾದರು.

‘ವಿನಿಶಿಯಾದ ಮೇಲೆ ಒಮ್ಮೆಲೇ ರಷ್ಯಾ ಆಕ್ರಮಣ ಮಾಡದು ಎಂಬ ನಂಬಿಕೆ ಇತ್ತು. ಪಶ್ಚಿಮ ಭಾಗದಲ್ಲಿದ್ದ ಕಾರಣ ನಾವು ಸುರಕ್ಷಿತ ಎಂದು ಭಾವಿಸಿದ್ದೆವು. ಆದರೆ ದಿನಕಳೆದಂತೆ ಇಲ್ಲಿನ ಪರಿಸ್ಥಿತಿಯೂ ಹದಗೆಡುವ ಲಕ್ಷಣ ಗೋಚರಿಸಿದ್ದಾಗ ಅಳಕು ಉಂಟಾಗಿತ್ತು. ಈಗ ಅವೆಲ್ಲ ನೆನೆದರೆ ಮೈ ಜುಮ್ಮೆನ್ನುತ್ತದೆ. ಕೆಟ್ಟ ಘಳಿಗೆಯಿಂದ ಹೊರಬಂದಿದ್ದಕ್ಕಾಗಿ ಸಮಾಧಾನ ಪಟ್ಟುಕೊಳ್ಳುತ್ತಿದ್ದೇನೆ’ ಎಂದು ಇಮ್ರಾನ್ ಹೇಳಿದರು.

ADVERTISEMENT

‘ಸರ್ಕಾರ ನನ್ನಂತ ನೂರಾರು ವಿದ್ಯಾರ್ಥಿಗಳನ್ನು ರಕ್ಷಿಸಿದೆ. ಆದರೆ ಕೀವ್, ಹಾರ್ಕಿವ್ ನಗರದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಬೇಕಾಗಿದೆ. ಇದೇ ನಮ್ಮ ಬೇಡಿಕೆಯೂ ಆಗಿದೆ’ ಎಂದರು.

‘ಮಗ ಸ್ವದೇಶಕ್ಕೆ ಮರಳಿ ಬರುವವರೆಗೂ ನಾವು ಆತಂಕದಲ್ಲೇ ದಿನ ಕಳೆದಿದ್ದೆವು. ಇಡೀ ದಿನ ಟಿವಿ ಮುಂದೆ ಕುಳಿತು ಯುದ್ಧದ ಸುದ್ದಿಗಳನ್ನೇ ನೋಡುತ್ತಿದ್ದೆವು. ದಾಳಿಯ ಭೀಕರತೆ ಕಂಡು ಹೊರಜಗತ್ತಿನ ಪರಿವೆ ಇರುತ್ತಿರಲಿಲ್ಲ. ಮಗ ಊರಿಗೆ ಮರಳಿದಾಗಲೆ ನಾವು ಸಹಜ ಸ್ಥಿತಿಗೆ ಬಂದೆವು’ ಎಂದು ಅಲ್ತಾಫ್ ಚೌದರಿ ಹೇಳಿದರು.

ಉಪವಿಭಾಗಾಧಿಕಾರಿ ದೇವರಾಜ ಆರ್., ತಹಶೀಲ್ದಾರ ಎಂ.ಆರ್.ಕುಲಕರ್ಣಿ ಇಮ್ರಾನ್ ಮನೆಗೆ ತೆರಳಿ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.