ಕಾರವಾರ: ‘ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜುಲೈ 12ರಂದು ಲೋಕ ಅದಾಲತ್ ನಡೆಯಲಿದ್ದು, 9 ಸಾವಿರದಷ್ಟು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ ತಿಳಿಸಿದರು.
‘ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ 39,270 ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಕೆಲ ವರ್ಷದಿಂದ ಬಾಕಿ ಉಳಿದುಕೊಂಡಿದೆ. ಅವುಗಳ ಪೈಕಿ 9 ಸಾವಿರದಷ್ಟು ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಪಡಿಸಬಹುದು ಎಂದು ನ್ಯಾಯಾಧೀಶರುಗಳು ಗುರುತಿಸಿದ್ದಾರೆ’ ಎಂದು ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಲೋಕ ಅದಾಲತ್ ಯಶಸ್ವಿಯಾಗಿಸಲು ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ವಿಮೆ ಕಂಪನಿಗಳು, ಬ್ಯಾಂಕ್‌ಗಳು, ವಕೀಲರೊಂದಿಗೆ ಚರ್ಚಿಸಲಾಗಿದೆ’ ಎಂದರು.
‘ವಿಚಾರಣೆ ಹಂತದಲ್ಲೇ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಮುಂದಿನ ಮೂರು ತಿಂಗಳ ಕಾಲ ಮಧ್ಯಸ್ಥಿಕೆ ಅಭಿಯಾನ ನಡೆಸಲಾಗುತ್ತಿದ್ದು, ಸಂಧಾನದ ಮೂಲಕ ಹೆಚ್ಚು ಕಾಲದಿಂದ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ’ ಎಂದು ತಿಳಿಸಿದರು.
‘ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಿಂದ ‘ಸಾಥಿ’ ಎಂಬ ಅಭಿಯಾನವನ್ನೂ ನಡೆಸಲಾಗುತ್ತಿದ್ದು, ಪರಿತ್ಯಕ್ತ ಮಕ್ಕಳಿಗೆ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ಗುರುತಿನ ಚೀಟಿಗಳನ್ನು ಒದಗಿಸುವ ಕೆಲಸ ನಡೆಯಲಿದೆ. ಅಂತಹ ಮಕ್ಕಳನ್ನು ಗುರುತಿಸಲು ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯವೂ ನಡೆದಿದೆ. ಸಮೀಕ್ಷೆ ಬಳಿಕ ಮಕ್ಕಳಿಗೆ ಅಗತ್ಯ ಸೌಲಭ್ಯ, ಜೀವನ ಭದ್ರತೆಗೆ ವ್ಯವಸ್ಥೆ ಒದಗಿಸಲಾಗುತ್ತದೆ’ ಎಂದರು.
Quote - ಕಳೆದ ಬಾರಿಯ ಲೋಕ ಅದಾಲತ್‌ನಲ್ಲಿ 6111 ಪ್ರಕರಣ ಇತ್ಯರ್ಥಗೊಂಡಿತ್ತು ಈ ಬಾರಿ ಅದಕ್ಕಿಂತ ಹೆಚ್ಚು ಪ್ರಕರಣ ಬಗೆಹರಿಸಲು ಪ್ರಯತ್ನಿಸುತ್ತೇವೆ ದಿವ್ಯಶ್ರೀ ಸಿ.ಎಂ ಹಿರಿಯ ಸಿವಿಲ್ ನ್ಯಾಯಾಧೀಶೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.