ಅಂಕೋಲಾ: ವಯೋಸಹಜ ಅನಾರೋಗ್ಯದಿಂದ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ ಅವರ ಅಂತ್ಯಕ್ರಿಯೆ ಮಂಗಳವಾರ ಹೊನ್ನಳ್ಳಿಯಲ್ಲಿರುವ ಅವರ ಕೃಷಿಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು, ಅಧಿಕಾರಿಗಳು, ತುಳಸಿ ಅವರ ಅಭಿಮಾನಿಗಳು ಕಣ್ಣೀರು ಸುರಿಸುತ್ತಲೇ ಅಂತಿಮ ನಮನ ಸಲ್ಲಿಸಿದರು. ತುಳಸಿ ನಿಧನದ ಸುದ್ದಿ ತಿಳಿದು ಜಿಲ್ಲೆಯ ವಿವಿಧೆಡೆಗಳಿಂದ ಜನರು ಹೊನ್ನಳ್ಳಿಗೆ ಭೇಟಿ ನೀಡಿ, ತುಳಸಿ ಗೌಡ ಅವರ ಅಂತಿಮ ದರ್ಶನ ಪಡೆದರು.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದವರು ತುಳಸಿ ಗೌಡ ಅವರ ಪರಿಸರ ಪ್ರೀತಿ ಕೊಂಡಾಡಿದರು. ಹಲವರು ಅವರ ಮುಗ್ಧತೆ, ಪ್ರೀತಿ ನೆನೆದು ಕಣ್ಣೀರಾದರು.
ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತುಳಸಿ ಗೌಡ ಅವರ ಪುತ್ರ, ಪುತ್ರಿ, ಮೊಮ್ಮಕ್ಕಳನ್ನು ಸಂತೈಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಪೊಲೀಸ್ ವಾದ್ಯ ತಂಡ ರಾಷ್ಟ್ರಗೀತೆ ಮೊಳಗಿಸಿದ ಬಳಿಕ ತುಳಸಿ ಅವರ ಪುತ್ರ ಸುಬ್ರಾಯ ಗೌಡ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
‘ಪರಿಸರ ಕಾಳಜಿ ವಿಚಾರದಲ್ಲಿ ತುಳಸಿ ಅವರಿಗೆ ಅವರೇ ಸರಿಸಾಟಿ. ಅವರ ಇಚ್ಛೆಯಂತೆ ಹೊನ್ನಳ್ಳಿಯಲ್ಲಿ ಬಸ್ ತಂಗುದಾಣ ನಿರ್ಮಾಣ, ಮೊಮ್ಮಗನಿಗೆ ಉದ್ಯೋಗದ ಬೇಡಿಕೆ ಈಡೇರಿಸಲಾಗುವುದು’ ಎಂದು ಶಾಸಕ ಸತೀಶ ಸೈಲ್ ಪ್ರತಿಕ್ರಿಯಿಸಿದರು.
‘ಲಾಭದ ಆಸೆ ಇಲ್ಲದೆ ಕೆಲಸ ಮಾಡುತ್ತಿದ್ದ ಅಜ್ಜಿಯನ್ನು (ತುಳಸಿ ಗೌಡ) ಕಂಡು ಊರಿನ ಜನ ಮರಗುತ್ತಿದ್ದರು. ಅವರು ಮಾಡಿದ ಕೆಲಸದ ಮೌಲ್ಯ ಈಗ ಪ್ರತಿಯೊಬ್ಬರಿಗೂ ಅರ್ಥವಾಗುತ್ತಿದೆ’ ಎಂದು ತುಳಸಿ ಗೌಡರ ಮೊಮ್ಮಗ ಶೇಖರ ಗೌಡ ಭಾವುಕರಾಗಿ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.