ಯಲ್ಲಾಪುರ: ‘ಅರಣ್ಯವಾಸಿಗಳು ತಾವು ವಾಸಿಸುತ್ತಿರುವ ಅರಣ್ಯ ಭೂಮಿ ಮಂಜೂರು ಪಡೆಯಲು ಕಾನೂನು ಅರಿವು ಅಗತ್ಯ. ಈ ನಿಟ್ಟಿನಲ್ಲಿ ಕಾನೂನು ಜಾಗೃತಿ ಜಾಥಾ ಮಾಡುತ್ತಿದ್ದೇವೆ. ಕಾನೂನು ಜ್ಞಾನದ ಕೊರತೆಯಿಂದ ಯಾರೂ ಭೂಮಿ ಹಕ್ಕಿನಿಂದ ವಂಚಿತರಾಗಬಾರದು’ ಎಂದು ಅರಣ್ಯ ಹಕ್ಕು ಹೋರಾಟ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ತಾಲ್ಲೂಕಿನ ಮಂಚಿಕೇರಿಯ ಮಹಾಗಣಪತಿ ದೇವಾಲಯದ ಸಂಭಾಗಣದಲ್ಲಿ ಸೋಮವಾರ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
‘ಅರಣ್ಯ ಹಕ್ಕು ಕಾನೂನು ಜಾರಿಗೆ ಬಂದು 18 ವರ್ಷಗಳಾದರೂ ಜಿಲ್ಲೆಯಲ್ಲಿ ಶೇ 10ರಷ್ಟು ಅರಣ್ಯವಾಸಿಗಳು ಮಂಜೂರಿಗೆ ಅರ್ಜಿ ನೀಡಿಲ್ಲ. ಶೇಕಡಾ 72ರಷ್ಟು ಅರಣ್ಯವಾಸಿಗಳ ಜಿಪಿಎಸ್ ಅಸಮರ್ಪಕವಾಗಿದೆ. ಜಿಲ್ಲೆಯಲ್ಲಿ ಸಲ್ಲಿಸಲಾದ 87,757 ಅರ್ಜಿಗಳಲ್ಲಿ ಪ್ರಥಮ ಹಂತದಲ್ಲಿ 69,733 ಅರ್ಜಿಗಳು ತಿರಸ್ಕೃತವಾಗಿವೆ. ಅಂದರೆ ಶೇ 73ರಷ್ಟು ಅರ್ಜಿಗಳು ತಿರಸ್ಕೃತವಾಗಿವೆ. ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಕ್ಕು ದೊರಕಿರುವುದು 2,852 ಅರ್ಜಿಗಳಿಗೆ ಮಾತ್ರ’ ಎಂದರು.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಶಿ ವಾಲ್ಮಿಕಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಹೇಶ ಮರಾಠಿ, ಭಾಸ್ಕರ ಗೌಡ, ವಿನೋದ ತಳಕೇರಿ, ಚಂದ್ರು ಪೂಜಾರಿ, ಬೀರಪ್ಪ ಬಿಳ್ಕಿ, ಕೃಷ್ಣ ನಾಯರ್, ನರಸಿಂಹ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.