ಅಂಕೋಲಾ: ಪರಿಹಾರ ಪಡೆಯಲು ಅರ್ಹ ವ್ಯಕ್ತಿಗೆ ಅವನು ಬದುಕಿರುವಾಗಲೇ ಪರಿಹಾರ ಸಿಗಬೇಕು ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಪ್ರಿಯಾ ಜೊಗಳೇಕರ ಹೇಳಿದರು.
ಇಲ್ಲಿಯ ನ್ಯಾಯಾಲಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ನಿಮಿತ್ತ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಅನೇಕ ಪ್ರಕರಣಗಳಲ್ಲಿ ಹಣ ಅಥವಾ ಇನ್ನಾವುದೇ ರೂಪದ ಪರಿಹಾರವನ್ನು ಕೋರಿದ ವ್ಯಕ್ತಿಯ ಪ್ರಕರಣ ದೀರ್ಘ ಕಾಲದವರೆಗೆ ನಡೆದರೆ ಪರಿಹಾರ ಸಿಗುವ ಮೊದಲೇ ಆತ ಮೃತಪಟ್ಟಿರುತ್ತಾನೆ. ನ್ಯಾಯಯುತ ಬೇಡಿಕೆ ಸೂಕ್ತ ಸಮಯದಲ್ಲಿ ಈಡೇರಬೇಕು. ಎಲ್ಐಸಿಯವರೂ ಸಹ ಈ ನಿಟ್ಟಿನಲ್ಲಿ ವಿಮರ್ಶೆ ಮಾಡಿಕೊಳ್ಳಬೇಕು. ಪೊಲೀಸ್, ಅರಣ್ಯ ಮತ್ತು ಅಬಕಾರಿ ಇಲಾಖೆಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೆಚ್ಚಾಗಿ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಂಡರೆ ಉತ್ತಮ. ಕೋರ್ಟ್‌ನಲ್ಲೇ ಸಮಯ ವ್ಯರ್ಥ ಮಾಡುವ ಬದಲು ಆದಷ್ಟು ಹೆಚ್ಚು ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬೇಕು. ಈ ಕುರಿತು ವಕೀಲರೂ ಹೆಚ್ಚಿನ ಆಸಕ್ತಿ ತೋರಬೇಕು’ ಎಂದರು.
ಸಭೆಯಲ್ಲಿ ಕೆಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಅವರು ನ್ಯಾಯಾಲಯದ ಎದುರಿನ ಮುಖ್ಯ ರಸ್ತೆಯಲ್ಲಿ ಹಂಪ್ ನಿರ್ಮಿಸುವಂತೆ ಪತ್ರ ಬರೆದು ಒಂದು ತಿಂಗಳಾದರೂ ಕ್ರಮ ವಹಿಸದ ಪುರಸಭೆಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಪೂಜಗೇರಿ ರಸ್ತೆಯನ್ನು ಮಳೆಗಾಲದಲ್ಲಿ ನಿರ್ಮಿಸಿ ಮತ್ತೆ ಹಾಳು ಮಾಡುವ ಬದಲು ಬೇಸಿಗೆಯಲ್ಲಿ ಗುಣಮಟ್ಟದಲ್ಲಿ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ನಗರದಲ್ಲಿ ಸ್ವಚ್ಚತೆಯ ಕಡೆ ಹೆಚ್ಚು ಗಮನ ಹರಿಸುವಂತೆಯೂ ಸೂಚಿಸಿದರು. ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆಯ ಜೊತೆ ಜಂಟಿ ಸಭೆ ನಡೆಸುವುದಾಗಿ ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅರ್ಪಿತಾ ಬೆಲ್ಲದ, ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು, ವಕಿಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.